ADVERTISEMENT

ಪಂಜಾಬ್‌: ವಿದ್ಯಾರ್ಥಿವೇತನ ಸಿಗದೆ ಕಾಲೇಜು ತೊರೆದ 2 ಲಕ್ಷ ಎಸ್‌ಸಿ ವಿದ್ಯಾರ್ಥಿಗಳು

ಪಿಟಿಐ
Published 20 ಜುಲೈ 2022, 11:16 IST
Last Updated 20 ಜುಲೈ 2022, 11:16 IST
ವಿಜಯ್‌ ಸಂಪ್ಲಾ
ವಿಜಯ್‌ ಸಂಪ್ಲಾ   

ನವದೆಹಲಿ: ಪಂಜಾಬ್ ಸರ್ಕಾರವು ₹2,000 ಕೋಟಿಯಷ್ಟು ವಿದ್ಯಾರ್ಥಿವೇತನವನ್ನು ಪಾವತಿಸದ ಕಾರಣ, ಸುಮಾರು ಎರಡು ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ ಎಂದು ಪರಿಶಿಷ್ಟ ಜಾತಿಗಾಗಿರುವ ರಾಷ್ಟ್ರೀಯ ಆಯೋಗ (ಎನ್‌ಸಿಎಸ್‌ಸಿ) ಬುಧವಾರ ತಿಳಿಸಿದೆ.

‘ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನದ ಬಾಕಿ ಪಾವತಿಸಿದ್ದರೂ, ಕಾಲೇಜುಗಳಿಗೆ ಏಕೆ ಹಣವನ್ನು ಪಾವತಿಸಿಲ್ಲ ಎಂಬ ಬಗ್ಗೆ ಆಯೋಗವು ರಾಜ್ಯ ಸರ್ಕಾರವನ್ನು ಕೇಳಿದೆ.ನಾವು ಈ ವಿಷಯದಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರವು ತಮ್ಮ ಶುಲ್ಕವನ್ನು ಪಾವತಿಸದ ಕಾರಣ ಕಾಲೇಜುಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ಬಂದಿವೆ’ ಎಂದುಎನ್‌ಸಿಎಸ್‌ಸಿ ಅಧ್ಯಕ್ಷ ವಿಜಯ್ ಸಂಪ್ಲಾ ತಿಳಿಸಿದರು.

‘2017ರಲ್ಲಿ ಸುಮಾರು ಮೂರು ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದಿದ್ದರು. 2020ರಲ್ಲಿ ಈ ಸಂಖ್ಯೆ 1 ರಿಂದ 1.25 ಲಕ್ಷಕ್ಕೆ ಇಳಿದಿದೆ. ಈ ಕುರಿತು ರಾಜ್ಯ ಸರ್ಕಾರವನ್ನು ಕೇಳಿದಾಗ, ಈ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಗಿದೆ.ಈ ಬಗ್ಗೆ ಚರ್ಚಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಪಂಜಾಬ್ ಸರ್ಕಾರದ ನಡುವೆ ಸೋಮವಾರ ಸಭೆ ನಡೆಸಲಾಯಿತು’ ಎಂದು ಸಂಪ್ಲಾ ಹೇಳಿದರು.

‘ವಿದ್ಯಾರ್ಥಿಗಳು ತೊರೆದಿರುವ ಕಾಲೇಜುಗಳಿಗೆ ರಾಜ್ಯ ಸರ್ಕಾರ ₹2000 ಕೋಟಿ ರೂ.ಗಳ ಬಾಕಿ ಪಾವತಿಸಬೇಕಿದ್ದು, ಕೇಂದ್ರದಿಂದ ಯಾವುದೇ ಬಾಕಿ ನೀಡಬೇಕಿಲ್ಲ ಎಂಬುದು ಸಭೆಯಲ್ಲಿ ತಿಳಿದುಬಂದಿದೆ. ಕಾಲೇಜುಗಳಿಗೆ ಬಾಕಿ ಪಾವತಿಸಬೇಕಾಗಿದ್ದ ಹಣ ಎಲ್ಲಿಗೆ ಹೋಯಿತು?’ ಎಂದು ಅವರು ಪ್ರಶ್ನಿಸಿದರು.

ಮುಂದಿನ ಬುಧವಾರದೊಳಗೆ ವಿದ್ಯಾರ್ಥಿ ವೇತನ ಬಾಕಿ ಕುರಿತಂತೆ ವಿವರಣೆ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಸಂಪ್ಲಾ ಹೇಳಿದ್ದಾರೆ.

ಇದೇ ವೇಳೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆದಿದ್ದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆ ಮಾಡುವಂತೆಕಳೆದ ವಾರಆದೇಶಿಸಿದ್ದಾರೆ.

‘ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿವೇತನದ ಮೊತ್ತ ಬಿಡುಗಡೆಗೆ ಸಂಬಂಧಿಸಿದ ಕಡತಗಳು ನನಗೆ ಬಂದಿವೆ.ಖಾಸಗಿ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಿರುವ ವೇಳೆ ನಡೆದಿರುವ ಅಕ್ರಮಗಳೂ ಪತ್ತೆಯಾಗಿವೆ. ಈ ಕುರಿತು ತನಿಖೆಗೆ ಆದೇಶ ನೀಡಲಾಗಿದೆ’ ಎಂದು ಮಾನ್‌ ಅವರು ಟ್ವೀಟ್‌ ಮೂಲಕ ತಿಳಿಸಿದ್ದು, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಭವಿಷ್ಯವನ್ನು ಪಣಕ್ಕಿಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.