ADVERTISEMENT

ಬಸ್‌–ಟ್ರಕ್ ಡಿಕ್ಕಿ: ಹೊತ್ತಿ ಉರಿದ ಬಸ್‌ನಲ್ಲಿದ್ದ 10 ಜನ ಸಜೀವ ದಹನ

ಏಜೆನ್ಸೀಸ್
Published 11 ಜನವರಿ 2020, 13:41 IST
Last Updated 11 ಜನವರಿ 2020, 13:41 IST
ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದ ವಾಹನಗಳು.
ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದ ವಾಹನಗಳು.   

ಲಖನೌ: ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಎರಡೂ ವಾಹನಗಳು ಹೊತ್ತಿ ಉರಿದಿವೆ. 10 ಮಂದಿ ಸಜೀವ ದಹನವಾಗಿದ್ದಾರೆ.

ಜೈಪುರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 46 ಪ್ರಯಾಣಿಕರಿದ್ದರು ಎಂದು ಹೇಳಲಾಗಿದ್ದು, 10 ಜನ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದ ಬಗ್ಗೆ ತಿಳಿದು ತೀವ್ರ ಬೇಸರವಾಯಿತು. ಅಪಘಾತದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗುವಂತೆ ಹಾರೈಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಹೊತ್ತಿ ಉರಿಯುತ್ತಿರುವ ಬಸ್ ಮತ್ತು ಟ್ರಕ್‌ನ ಬೆಂಕಿ ನಂದಿಸಲು ಮೂರರಿಂದ ನಾಲ್ಕು ಅಗ್ನಿಶಾಮಕ ವಾಹನಗಳು 30 ರಿಂದ 40 ನಿಮಿಷ ಪ್ರಯತ್ನಿಸಿದವು. ಈಗ ಬೆಂಕಿಯನ್ನು ನಂದಿಸಲಾಗಿದೆ. ಸದ್ಯ 21 ಜನರು ಅಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿನ ಇನ್ನುಳಿದ ಪ್ರಯಾಣಿಕರು ಜೀವಂತವಾಗಿರುವುದು ಅನುಮಾನ ಎಂದು ಕಾನ್ಪುರ ರೇಂಜ್‌ನ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್‌ವಾಲ್ ತಿಳಿಸಿದ್ದಾರೆ.

ಅನೇಕ ಪ್ರಯಾಣಿಕರಿದ್ದ ಬಸ್‌ನಿಂದ ಅಪಘಾತವಾದಾಗ ಕೇವಲ 10 ರಿಂದ 12 ಮಂದಿಗೆಮಾತ್ರ ಹೊರಬರಲು ಸಾಧ್ಯವಾಯಿತು. ಉಳಿದವರೆಲ್ಲರೂ ಬಸ್ ಒಳಗೆ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.