ADVERTISEMENT

'ಖಾದಿ ಆಯೋಗದಿಂದ 20 ಲಕ್ಷ ಉದ್ಯೋಗ ಸೃಷ್ಟಿ'

ಕೆವಿಐಸಿ ಅಧ್ಯಕ್ಷ ವಿನಯ ಕುಮಾರ್‌ ಸಕ್ಸೇನಾ ಮಾಹಿತಿ

ಪಿಟಿಐ
Published 14 ಏಪ್ರಿಲ್ 2019, 16:48 IST
Last Updated 14 ಏಪ್ರಿಲ್ 2019, 16:48 IST
   

ನವದೆಹಲಿ: ಮಹತ್ವಾಕಾಂಕ್ಷೆಯ ಪ್ರಧಾನಿ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ (ಪಿಎಂಇಜಿಪಿ) ಕಳೆದ ಐದು ವರ್ಷಗಳ ಅವಧಿಯಲ್ಲಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಜಿಸಲಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷ ವಿನಯಕುಮಾರ್‌ ಸಕ್ಸೇನಾ ಹೇಳಿದ್ದಾರೆ.

‘2014–15ಕ್ಕೂ ಮುಂಚೆ ನಿಗದಿಪಡಿಸಿದ ಗುರಿ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಪ್ರಧಾನಿ ಮೋದಿ ಅವರು ಕೈಗೊಂಡ ಡಿಜಿಟಲ್ ಇಂಡಿಯಾ ಮತ್ತಿತರ ಉಪಕ್ರಮಗಳಿಂದಾಗಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಆಯೋಗವು ತನಗೆ ನಿಗದಿ ಪಡಿಸಿದ ಗುರಿಗಿಂತ ಹೆಚ್ಚು ಸಾಧನೆ ದಾಖಲಿಸಿದೆ’ ಎಂದು ವಿವರಿಸಿದ್ದಾರೆ.

‘ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂಬಂತಹ ಕೂಗು ಎದ್ದಿರುವಾಗ ಆಯೋಗದ ಸಾಧನೆಯನ್ನು ನಂಬಲು ಕಷ್ಟ ಎನಿಸಬಹುದು. ಆಯೋಗವು ಪಿಎಂಇಜಿಪಿ ಅಡಿ 2,67,226 ಹೊಸ ಯೋಜನೆಗಳನ್ನು ಜಾರಿಗೊಳಿಸಿ, 20,63,152 ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ಮೊದಲು ಪಿಎಂಇಜಿಪಿಯನ್ನು ಆಫ್‌ಲೈನ್‌ ವ್ಯವಸ್ಥೆಯಡಿ ಜಾರಿಗೊಳಿಸಲಾಗುತ್ತಿತ್ತು. ಹೀಗಾಗಿ ತಾಂತ್ರಿಕ ನೆರವಿಗಾಗಿ ಹೊರಗುತ್ತಿಗೆ ಸೇವೆ ಒದಗಿಸುವ ಸಂಸ್ಥೆಗಳನ್ನೇ ಅವಲಂಬಿಸಬೇಕಾಗುತ್ತಿತ್ತು.

ಕೆವಿಐಸಿ ಆನ್‌ಲೈನ್‌ ಪೋರ್ಟಲ್‌ ಆರಂಭಿಸಿದ ಮೇಲೆ ಹೆಚ್ಚು ಪಾರದರ್ಶಕತೆ ಬಂದಿದ್ದು, ಮಾರ್ಜಿನ್‌ ಹಣ ಹಾಗೂ ಸಬ್ಸಿಡಿ ಬಡವಾಡೆ ತ್ವರಿತಗತಿವಾಗಿ ನಡೆಯುತ್ತಿದೆ ಎಂದು ಕೆವಿಐಸಿ ಅಧ್ಯಕ್ಷ ವಿನಯಕುಮಾರ್‌ ಸಕ್ಸೇನಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.