
ತಿರುವನಂತಪುರ: ಕೇರಳದಲ್ಲಿ ನಟಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಆರು ಜನರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಎರ್ನಾಕುಲಂನ ನ್ಯಾಯಾಲಯವೊಂದು ಶುಕ್ರವಾರ ವಿಧಿಸಿದೆ.
ಸುನಿಲ್ ಎನ್.ಎಸ್. ಅಲಿಯಾಸ್ ಪಲ್ಸರ್ ಸುನಿ ಹಾಗೂ ಮಾರ್ಟಿನ್ ಆಂಟನಿ, ಮಣಿಕಂಠನ್ ಬಿ, ವಿಜೇಶ್ ವಿ.ಪಿ, ಸಲೀಂ ಎಚ್. ಮತ್ತು ಪ್ರದೀಪ್ ಶಿಕ್ಷೆಗೊಳಗಾದವರು. ಇದೇ ಪ್ರಕರಣದಲ್ಲಿ ಡಿಸೆಂಬರ್ 8ರಂದು ನಟ ದಿಲೀಪ್ ಮತ್ತು ಇತರ ಮೂವರನ್ನು ಖುಲಾಸೆಗೊಳಿಸಲಾಗಿದೆ.
ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು ಈ ತೀರ್ಪು ನೀಡಿದ್ದು, ‘ನ್ಯಾಯಾಲಯದ ತೀರ್ಪು ಯಾವುದೇ ಸಾರ್ವಜನಿಕ ಚರ್ಚೆಗಳಿಂದ ಪ್ರಭಾವಿತಗೊಂಡಿಲ್ಲ. ಆದರೆ ತಪ್ಪಿತಸ್ಥರ ವಯಸ್ಸು ಮತ್ತು ಅವರ ಕುಟುಂಬವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.
ನ್ಯಾಯಾಲಯದ ಕಲಾಪಗಳನ್ನು ತಿರುಚಿ ವರದಿ ಮಾಡುವ ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾಧೀಶರು, ‘ನ್ಯಾಯಾಂಗ ವ್ಯವಸ್ಥೆಯನ್ನು ಹಾಳುಮಾಡುವ ಇಂತಹ ವರದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
2017ರ ಫೆಬ್ರುವರಿ 17ರಂದು ನಟಿಯನ್ನು ಅಪಹರಿಸಿದ್ದ ಸುನಿಲ್ ನೇತೃತ್ವದ ತಂಡ ಚಲಿಸುವ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿತ್ತು. ಮರುದಿನ ನಟಿ ದೂರು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.