ADVERTISEMENT

ರಾಹುಲ್‌ ಪ್ರಧಾನಿ ಅಭ್ಯರ್ಥಿಯಲ್ಲ: ಚಿದಂಬರಂ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 20:14 IST
Last Updated 22 ಅಕ್ಟೋಬರ್ 2018, 20:14 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

‘ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ನಾವು ಎಲ್ಲೂ ಹೇಳಿಲ್ಲ. ಕಾಂಗ್ರೆಸ್‌ ಪಕ್ಷದ ಕೆಲವರು ಈ ಬಗ್ಗೆ ಮಾತನಾಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಮಧ್ಯ ಪ್ರವೇಶಿಸಿ ಈ ರೀತಿಯ ಹೇಳಿಕೆ ನೀಡದಂತೆ ಈಗಾಗಲೇ ಸೂಚಿಸಿದೆ’ ಎಂದು ಅವರು ನ್ಯೂಸ್‌–18 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು ನಮ್ಮ ಮುಖ್ಯ ಗುರಿ. ಪ್ರಗತಿಪರ ಪರ್ಯಾಯ ಸರ್ಕಾರ ರಚಿಸುವುದು ನಮ್ಮ ಉದ್ದೇಶ’ ಎಂದು ಚಿದಂಬರಂ ಹೇಳಿದ್ದಾರೆ.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಣಿಯಲು ವಿರೋಧ ಪಕ್ಷಗಳನ್ನೊಳಗೊಂಡ ಮಹಾಮೈತ್ರಿ ರಚಿಸುವ ಕಾಂಗ್ರೆಸ್‌ ಪ್ರಯತ್ನದ ನಿಟ್ಟಿನಲ್ಲಿ ಚಿದಂಬರಂ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಅವರು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹೋರಾಟದಲ್ಲಿ ರಾಹುಲ್‌ ಗಾಂಧಿ ಅವರನ್ನು ಕಡೆಗಣಿಸುವ ಸಾಧ್ಯತೆ ಇರುವುದರಿಂದ ಚಿದಂಬರಂ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ಮೊದಲು ಮೈತ್ರಿಕೂಟ ರಚನೆಯಾಗಬೇಕು. ಚುನಾವಣೆ ನಂತರ ಮೈತ್ರಿಕೂಟದಲ್ಲಿರುವ ಪಕ್ಷಗಳ ನಾಯಕರು ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿರುವ ಪಕ್ಷಗಳು ಬಯಸಿದರೆ ಮಾತ್ರ ತಾವು ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ ಎಂದು ರಾಹುಲ್‌ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.