ಚೆನ್ನೈ: 2021ರಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಎಐಎಡಿಎಂಕೆ ನ.20ರಂದು ಪಕ್ಷದ ವಲಯ ಮುಖ್ಯಸ್ಥರು, ಸಚಿವರು, ಜಿಲ್ಲಾ ಕಾರ್ಯದರ್ಶಿಗಳ ಸಭೆಯನ್ನು ಕರೆದಿದೆ.
ಚುನಾವಣಾ ತಂತ್ರಗಾರ ಎನಿಸಿರುವ ಗೃಹಸಚಿವ ಅಮಿತ್ ಶಾ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಭೇಟಿ ನೀಡುತ್ತಿರುವ ಹಿಂದಿನ ದಿನವೇ ಎಐಎಡಿಎಂಕೆ ಸಭೆ ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಭೆಯ ಕಾರ್ಯಸೂಚಿ ಏನೆಂದು ಅಧಿಕೃತವಾಗಿ ಬಹಿರಂಗವಾಗಿಲ್ಲ. ಹಾಗಿದ್ದರೂ, ಚುನಾವಣಾಪೂರ್ವ ಮೈತ್ರಿ ಹಾಗೂ ಜನವರಿ ಅಂತ್ಯದ ವೇಳೆಗೆ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರುಜೈಲಿನಿಂದ ಬಿಡುಗಡೆ ಆಗುವುದರ ಪರಿಣಾಮದ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆಗಳಿವೆ.
‘ತಮಿಳುನಾಡು ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಕೊನೆಯವರೆಗೂ ಮೈತ್ರಿಗಾಗಿ ಪಕ್ಷ ಕಾಯಲಾರದು. ಬಿಜೆಪಿ ಜೊತೆ ಹೊಂದಾಣಿಕೆ ಬಗ್ಗೆ ಎಐಎಡಿಎಂಕೆಯಲ್ಲಿ ಗೊಂದಲಗಳಿದ್ದರೂ, ಪಕ್ಷದ ಎದುರಿಗಿರುವ ಆಯ್ಕೆಗಳು ಕಡಿಮೆ. ಮೈತ್ರಿಗೆ ಬಿಜೆಪಿ ಒಲವು ವ್ಯಕ್ತಪಡಿಸಿದ್ದು, ಬಹುತೇಕ ಅಂತಿಮಗೊಳ್ಳಲಿದೆ. ಅಮಿತ್ ಶಾ ಭೇಟಿಯಲ್ಲಿ ಅದಕ್ಕೊಂದು ಸ್ಪಷ್ಟ ರೂಪು ಸಿಗಲಿದೆ’ ಎಂದು ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
15 ವರ್ಷಗಳ ಬಳಿಕ 2019ರಲ್ಲಿ ಬಿಜೆಪಿ–ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದ್ದವು. 2021ರಲ್ಲೂ ಅದು ಮುಂದುವರಿಯುವ ಸಾಧ್ಯತೆಗಳಿವೆ. ಎಐಎಡಿಎಂಕೆ ನಾಯಕ ಒ.ಪನ್ನೀರಸೆಲ್ವಂ ಹಾಗೂ ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನುಅಮಿತ್ ಶಾ ಶನಿವಾರ ಭೇಟಿ ಮಾಡುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.