ADVERTISEMENT

ನೀಟ್-ಪಿಜಿ ಪರೀಕ್ಷೆ ಮುಂದೂಡಿದರೆ ಪರ್ಯಾಯ ದಿನಾಂಕ ಲಭ್ಯವಿಲ್ಲ: ಎನ್‌ಬಿಇ

ನೀಟ್-ಪಿಜಿ: 2.09 ಲಕ್ಷ ಮಂದಿ ನೋಂದಣಿ

ಪಿಟಿಐ
Published 24 ಫೆಬ್ರುವರಿ 2023, 13:34 IST
Last Updated 24 ಫೆಬ್ರುವರಿ 2023, 13:34 IST
.
.   

ನವದೆಹಲಿ: ಮಾರ್ಚ್ 5 ರಂದು ನಿಗದಿಯಾಗಿರುವ ನೀಟ್-ಪಿಜಿ ಪರೀಕ್ಷೆಗೆ ಸುಮಾರು 2.09 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಪರೀಕ್ಷೆ ಮುಂದೂಡಿದರೆ ಮುಂದಿನ ದಿನಗಳಲ್ಲಿ ನಡೆಸಲು ಯಾವುದೇ ಪರ್ಯಾಯ ದಿನಾಂಕ ಲಭ್ಯವಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಐ) ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)-ಪಿಜಿ ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಆರ್.ಭಟ್ ಮತ್ತು ದೀಪಂಕರ್ ದತ್ತಾ ಪೀಠದ ಮುಂದೆ ಈ ಹೇಳಿಕೆ ನೀಡಲಾಗಿದೆ.

ಅರ್ಜಿದಾರರು ಎತ್ತಿರುವ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಂತೆ ಎನ್‌ಬಿಇ ಪರ ಹಾಜರಾದ ವಕೀಲರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಅವರಿಗೆ ಸೂಚಿಸಿದ ಕೋರ್ಟ್, ಈ ಸಂಬಂಧ ಯಾವುದೇ ಆದೇಶ ಹೊರಡಿಸುವುದಿಲ್ಲ ಎಂದು ತಿಳಿಸಿದೆ.

ADVERTISEMENT

ಮುಂದಿನ ವಿಚಾರಣೆಯನ್ನು ಫೆ.27 ಕ್ಕೆ ಮುಂದೂಡಿದೆ.

ಇಂಟರ್ನ್‌ಷಿಪ್‌ಗೆ ಕಟ್-ಆಫ್ ದಿನಾಂಕ ವಿಸ್ತರಿಸಿರುವುದರಿಂದ ಕೌನ್ಸೆಲಿಂಗ್ ಅನ್ನು ಆ. 11 ರ ನಂತರ ನಡೆಸಬೇಕಾಗಿದೆ. ಹಾಗಾಗಿ ಅರ್ಜಿದಾರರು ಪರೀಕ್ಷೆ ಮುಂದೂಡಬೇಕೆಂದು ಕೋರಿದ್ದಾರೆ.

‘ಈ ಪರೀಕ್ಷೆಗೆ ಕಾಯುತ್ತಿರುವವರಿಗೆ, ಇದು ಮಾನಸಿಕ ಹಿಂಸೆಯಾಗಿದೆ. ನಾವು ನ್ಯಾಯಾಂಗ ಪರೀಕ್ಷೆ ಮುಂದೂಡಿದಾಗ, ಅದಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ವೇದನೆ ಇರುತ್ತದೆ’ ಎಂದು ಕೋರ್ಟ್‌ ಹೇಳಿದೆ.

13 ಅರ್ಜಿದಾರರು ಸುಪ್ರೀಂ ಕೋರ್ಟ್ ಸಂಪರ್ಕಿಸಿದ್ದರೂ, ಅವರು ಎತ್ತಿದ ವಿಷಯವು ಸುಮಾರು 45,000 ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ತಿಳಿಸಿದರು.

ಮಾರ್ಚ್ 5 ರಂದು ನಿಗದಿಯಾಗಿರುವ ಪರೀಕ್ಷೆ ಮತ್ತು ಕೌನ್ಸೆಲಿಂಗ್ ನಡುವಿನ ಅಂತರ ಐದು ತಿಂಗಳಿಗೂ ಹೆಚ್ಚು ಇರುತ್ತದೆ ಎಂದು ಹೇಳಿದರು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ವಿವಿಧ ರಾಜ್ಯಗಳು ಇಂಟರ್ನ್‌ಶಿಪ್‌ಗೆ ವಿಭಿನ್ನ ವೇಳಾಪಟ್ಟಿ ಹೊಂದಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದರು.

ಇಂಟರ್ನ್‌ಶಿಪ್‌ ದಿನಾಂಕವನ್ನು ಆ. 11 ರವರೆಗೆ ವಿಸ್ತರಿಸಿರುವುದರಿಂದ ಅರ್ಜಿದಾರರು ಪರೀಕ್ಷೆಗೆ ಅರ್ಹರಾಗಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.