ADVERTISEMENT

ಅಂತ್ಯ ಸಂಸ್ಕಾರಕ್ಕೆ ಹೋಗಿದ್ದವರ ಮೇಲೆ ಚಾವಣಿ ಕುಸಿತ: ಮೃತರ ಸಂಖ್ಯೆ 24ಕ್ಕೆ ಏರಿಕೆ

ಪಿಟಿಐ
Published 4 ಜನವರಿ 2021, 3:57 IST
Last Updated 4 ಜನವರಿ 2021, 3:57 IST
ಶವಾಗಾರದಲ್ಲಿ ಚಾವಣಿ ಕುಸಿದು ಬಲಿಯಾದವರ ಕುಟುಂಬ ಸದಸ್ಯರು ಗಾಜಿಯಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ದುಃಖಿಸಿದರು
ಶವಾಗಾರದಲ್ಲಿ ಚಾವಣಿ ಕುಸಿದು ಬಲಿಯಾದವರ ಕುಟುಂಬ ಸದಸ್ಯರು ಗಾಜಿಯಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ದುಃಖಿಸಿದರು   

ಗಾಜಿಯಾಬಾದ್: ರಾಷ್ಟ್ರ ರಾಜಧಾನಿಯ ಪಕ್ಕದಲ್ಲಿರುವ ಗಾಜಿಯಾಬಾದ್ ಜಿಲ್ಲೆಯ ಮುರಾದ್‌ನಗರದಲ್ಲಿ ಅಂತ್ಯಸಂಸ್ಕಾರಕ್ಕೆಂದು ಶವಾಗಾರಕ್ಕೆ ತೆರಳಿದ್ದವರ ಮೇಲೆ ಭಾನುವಾರ ಚಾವಣಿ ಕುಸಿದ ಪರಿಣಾಮ 24 ಮಂದಿ ಮೃತಪಟ್ಟಿದ್ದು, 17 ಜನರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಬರುತ್ತಿದ್ದ ಕಾರಣದಿಂದಾಗಿ ಇತ್ತೀಚೆಗೆ ನಿರ್ಮಿಸಿದ್ದ ಶವಾಗಾರದಲ್ಲಿದ್ದ ಚಾವಣಿಯೊಂದರ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಇದೇವೇಳೆ ಚಾವಣಿ ಕುಸಿದೆದೆ. ಮೃತರಲ್ಲಿ ಬಹುತೇಕರು ಜೈರಾಮ್ ಎನ್ನುವವರ ಶವಸಂಸ್ಕಾರಕ್ಕೆ ಬಂದಿದ್ದ ಸಂಬಂಧಿಕರು ಮತ್ತು ನೆರೆಹೊರೆಯವರಾಗಿದ್ದರು.

ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ಘಟನೆ ಬಳಿಕ ಉಖ್ಲರ್ಸಿ ಗ್ರಾಮದಲ್ಲಿರುವ ಶವಾಗಾರಕ್ಕೆ ಸ್ಥಳೀಯ ಜನರು ಮೊದಲು ಬಂದಿದ್ದಾರೆ. ಬಳಿಕ ಮಾಹಿತಿ ತಿಳಿದ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಘಟಕವೂ ಸ್ಥಳಕ್ಕಾಗಮಿಸಿ, ಸತ್ತವರನ್ನು ಮತ್ತು ಗಾಯಾಳುಗಳನ್ನು ಅವಶೇಷಗಳಿಂದ ಹೊರಗೆಳೆದಿದೆ.

ADVERTISEMENT

ಘಟನೆಯಲ್ಲಿ 24 ಜನರು ಮೃತಪಟ್ಟಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ. ಸಂಜೆಯ ವೇಳೆಗೆ ಅವರಲ್ಲಿ ಕನಿಷ್ಠ 18 ಮಂದಿಯನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ಹೇಳಿದ್ದಾರೆ.

ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

ಗಾಜಿಯಾಬಾದ್‌ ಸಂಸದರಾಗಿರುವ ಕೇಂದ್ರ ಸಚಿವ ವಿ.ಕೆ. ಸಿಂಗ್ ಸೇರಿ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.