ADVERTISEMENT

ವಡೋದರ | ರಾಮ ನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ; 24 ಮಂದಿ ಪೊಲೀಸರ ವಶಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2023, 9:33 IST
Last Updated 31 ಮಾರ್ಚ್ 2023, 9:33 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ವಡೋದರ (ಗುಜರಾತ್): ನಗರದ ಫತೇಹ್‌ಪುರ ಪ್ರದೇಶದಲ್ಲಿ ರಾಮ ನವಮಿ ಉತ್ಸವದ ಅಂಗವಾಗಿ ಗುರುವಾರ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ಕಲ್ಲುಗಳನ್ನು ತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ರಾಮ ನವಮಿ ಆಚರಣೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಜನರನ್ನು ವಶಕ್ಕೆ ಪಡೆದಿದ್ದೇವೆ. ಎಫ್‌ಐಆರ್‌ ದಾಖಲಾದ ಬಳಿಕ ಎಲ್ಲರನ್ನೂ ಅಧಿಕೃತವಾಗಿ ಬಂಧಿಸಲಾಗುವುದು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜನಜೀವನ ಸಹಜ ಸ್ಥಿತಿಯಲ್ಲಿದೆ' ಎಂದು ವಡೋದರ ಪೊಲೀಸ್‌ ಕಮಿಷನರ್‌ ಶಮ್ಶೇರ್‌ ಸಿಂಗ್‌ ಹೇಳಿದ್ದಾರೆ.

ಧಾರ್ಮಿಕ ಸೂಕ್ಷ್ಮ ಪ್ರದೇಶವಾಗಿರುವ ಫತೇಹ್‌ಪುರ ಪ್ರದೇಶ ಹಾಗೂ ಕುಂಭರ್ವಾಡ ಸಮೀಪ ಮೆರವಣಿಗೆ ಸಾಗುತ್ತಿದ್ದಾಗ ಕೆಲವರು ಕಲ್ಲು ತೂರಾಟ ನಡೆಸಿದ್ದರು. ಇದರಿಂದಾಗಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ಮನಿಶಾ ವಕೀಲ್‌ ಅವರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಜನರು ಓಡುತ್ತಿರುವ ಹಾಗೂ ಶ್ರೀರಾಮನ ಮೂರ್ತಿ ಇದ್ದ ಸಾರೋಟನ್ನು ಭಕ್ತರು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಕೆಲವು ವಾಹಿನಿಗಳಲ್ಲಿ ಪ್ರಸಾರವಾಗಿವೆ.

ಘಟನೆಯಲ್ಲಿ ಕೆಲ ವಾಹನಗಳೂ ಜಖಂಗೊಂಡಿವೆ.

‘ಈ ಹಿಂದೆಯೂ ಇಂಥ ಘಟನೆಗಳು ಸಂಭವಿಸಿದ್ದವು. ಈ ಬಗ್ಗೆ ಗೊತ್ತಿದ್ದರೂ, ಶೋಭಾಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲಿ ಇರಲಿಲ್ಲ’ ಎಂದು ಬಜರಂಗದಳ ಮುಖಂಡರೊಬ್ಬರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.