ADVERTISEMENT

ಅಪಘಾತ: 24 ವಲಸೆ ಕಾರ್ಮಿಕರ ದುರ್ಮರಣ

ಉತ್ತರ ಪ್ರದೇಶದ ಔರಯ್ಯಾ ಬಳಿ ದುರಂತ: ಮನೆ ಬದಲು ಮಸಣ ಸೇರಿದ ನತದೃಷ್ಟರು, 36 ಕಾರ್ಮಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಮೇ 2020, 20:00 IST
Last Updated 16 ಮೇ 2020, 20:00 IST
ಅಪಘಾತದ ನಡೆದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು –ಪಿಟಿಐ ಚಿತ್ರ
ಅಪಘಾತದ ನಡೆದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು –ಪಿಟಿಐ ಚಿತ್ರ   

ಲಖನೌ: ಎರಡು ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 24 ವಲಸೆ ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ಉತ್ತರ ಪ್ರದೇಶದ ಔರೆಯಾ ಸಮೀಪದ ರಾಷ್ಟ್ರೀಯ ಹೆದ್ದಾರಿ–19ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಈ ದುರ್ಘಟನೆಯಲ್ಲಿ 36 ಜನರು ಗಾಯಗೊಂಡಿದ್ದು, 14 ಮಂದಿ ಸ್ಥಿತಿ ಗಂಭೀರವಾಗಿದೆ. ಎರಡೂ ಲಾರಿಗಳಲ್ಲಿ ವಲಸೆ ಕಾರ್ಮಿಕರಿದ್ದರು. ಬೆಳಗಿನ ಜಾವ 3 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಲಾರಿಯು, ಸ್ಟೇಷನರಿ ಸಾಮಗ್ರಿಗಳನ್ನುಸಾಗಿಸುತ್ತಿದ್ದ ಇನ್ನೊಂದು ಲಾರಿಗೆ ರಭಸವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ವಾಹನಗಳು ನಜ್ಜುಗುಜ್ಜಾಗಿ ಮಗುಚಿ ಬಿದ್ದಿದ್ದು, ರಸ್ತೆಯ ಬದಿಯ ಕಂದಕಕ್ಕೆ ಉರುಳಿವೆ.

ADVERTISEMENT

ಮೃತಪಟ್ಟ ಕಾರ್ಮಿಕರು ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ಪೂರ್ವ ಭಾಗದ ಖುಷಿನಗರ್ ಮೂಲದವರು. ಸ್ಟೇಷನರಿ ಸಾಮಗ್ರಿ ಸಾಗಿಸುತ್ತಿದ್ದ ಲಾರಿಯು ದೆಹಲಿಯಿಂದ ಮಧ್ಯಪ್ರದೇಶ ದತ್ತ ಹಾಗೂ ಇನ್ನೊಂದು ಲಾರಿ ರಾಜಸ್ಥಾನದಿಂದ ಉತ್ತರ ಪ್ರದೇಶದ ಗೋರಖಪುರ್‌ದತ್ತ ತೆರಳುತ್ತಿದ್ದವು.

ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು, ದಿನದ ತುತ್ತಿಗೂ ಪರದಾಡ ಬೇಕಾದ ಸ್ಥಿತಿಗೆ ತಲುಪಿದ್ದ ವಲಸೆ ಕಾರ್ಮಿಕರು ಊರು ತಲುಪಿಕೊಳ್ಳುವ ಧಾವಂತದಲ್ಲಿ ಈ ಲಾರಿಗಳನ್ನು ಏರಿದ್ದರು. ಆದರೆ, 24 ಮಂದಿ ಮನೆಗೆ ಬದಲಾಗಿ ಮಸಣ ತಲುಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಸಮೀಪದ ಎರಡು ಪೊಲೀಸ್‌ ಠಾಣೆಗಳ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದೆ.

***

ಇದೊಂದು ದುರಂತದ ಘಟನೆ. ಕೇಂದ್ರ ಸರ್ಕಾರ ಪರಿಹಾರ ಕಾರ್ಯಗಳನ್ನು ಚುರುಕಿನಿಂದ ಕೈಗೊಳ್ಳುತ್ತಿದೆ.

- ನರೇಂದ್ರ ಮೋದಿ, ಪ್ರಧಾನಿ

***

ಇವು, ಕೇವಲ ಸಾವುಗಳಲ್ಲ. ಸಾಮೂಹಿಕ ಕೊಲೆ. ನೋವಿನ ಘಟನೆ. ಹೃದಯವಿಲ್ಲದ ಜನರು ಎಷ್ಟು ದಿನ ಮೌನವಾಗಿರುತ್ತಾರೋ ನೋಡೋಣ. ಈ ನಿರ್ಲಕ್ಷ್ಯವನ್ನು ಅವರ ಬೆಂಬಲಿಗರು ಸಮರ್ಥಿಸಿಕೊಳ್ಳಲಿ.

- ಅಖಿಲೇಶ್ ಯಾದವ್‌, ಮುಖ್ಯಸ್ಥ, ಸಮಾಜವಾದಿ ಪಕ್ಷ.

***

ವಲಸೆ ಕಾರ್ಮಿಕರ ಸುರಕ್ಷತೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದಕ್ಕೆ ಈ ದುರಂತವೇ ಸಾಕ್ಷಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕಾರಣ ಬಿಟ್ಟು ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು.

- ಮಾಯಾವತಿ, ಅಧ್ಯಕ್ಷೆ, ಬಿ.ಎಸ್‌.ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.