ADVERTISEMENT

ಕೇರಳ: ಗೋಮಾಂಸ ಸೇವಿಸಿದ 24 ಬುಡಕಟ್ಟು ಜನಾಂಗದವರಿಗೆ ಸಾಮಾಜಿಕ ಬಹಿಷ್ಕಾರ

ಪಿಟಿಐ
Published 11 ಡಿಸೆಂಬರ್ 2021, 2:30 IST
Last Updated 11 ಡಿಸೆಂಬರ್ 2021, 2:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಡುಕ್ಕಿ, ಕೇರಳ: ತಮ್ಮ ಸಂಪ್ರದಾಯಕ್ಕೆ ವಿರುದ್ಧ ಎನ್ನಲಾದ ಆಹಾರ ಪದ್ಧತಿ ಗೋಮಾಂಸ ಸೇವನೆ ಮಾಡಿದ 24 ಮಂದಿ ಬುಡಕಟ್ಟು ಜನಾಂಗದ ಪುರುಷರಿಗೆ ಆ ಜನಾಂಗದ ಊರುಕ್ಕೂಟಮ್‌ (ಬುಡಕಟ್ಟು ಜನಾಂಗದ ಪರಿಷತ್ತು) ಸಾಮಾಜಿಕ ಬಹಿಷ್ಕಾರ ಹೇರಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮರಯೂರು ಅರಣ್ಯ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯ ಸ್ವಯಂ ಆಡಳಿತ ಮತ್ತು ಬುಡಕಟ್ಟು ಸಚಿವಾಲಯವು ಬುಡಕಟ್ಟು ಸಮುದಾಯದ ಮುಖಂಡರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿವೆ ಎಂದು ಪೊಲೀಸರು ಹೇಳಿದರು.

ಈ ವಿಷಯದ ಸಂಬಂಧ ಯಾರೊಬ್ಬರೂ ಮುಂದೆ ಬಂದು ದೂರು ನೀಡುತ್ತಿಲ್ಲ. ಆದ್ದರಿಂದ ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ ವಿವಿಧ ಕಡೆಗಳಿಂದ ದೊರೆತ ಮಾಹಿತಿಯಿಂದ ತನಿಖೆಯೊಂದನ್ನು ಆರಂಭಿಸಿರುವುದಾಗಿ ಅವರು ಹೇಳಿದರು.

ADVERTISEMENT

ಬುಡಕಟ್ಟು ಜನಾಂಗದ 24 ಪುರುಷರು ತಮ್ಮ ಕುಗ್ರಾಮಗಳಿಂದ ಅರಣ್ಯ ಪ್ರದೇಶಗಳಿಗೆ ಬಂದು ಗೋಮಾಂಸ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಚರ್ಚಿಸಿದ ಬಡಕಟ್ಟು ಮುಖಂಡರ ನೇತೃತ್ವದಲ್ಲಿ ನಡೆದ ಊರುಕ್ಕೂಟಮ್‌ ಸಭೆಯು, ಪುರುಷರು ಗೋಮಾಂಸ ತಿನ್ನುವ ಮೂಲಕ ಶತಮಾನದ ತಮ್ಮ ಪದ್ಧತಿ, ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿತು.

ಬಹಿಷ್ಜಾರಗೊಂಡ ಪುರುಷರು ಅರಣ್ಯದ ನಿರ್ಜನ ಪ್ರದೇಶಕ್ಕೆ ತೆರಳಬೇಕು. ಅವರ ಪತ್ನಿ, ಸಂಬಂಧಿಗಳು, ಮಕ್ಕಳು, ತಂದೆ–ತಾಯಿ ಸೇರಿ ಯಾರೂ ಅವರನ್ನು ಸಂ‍ಪರ್ಕಿಸುವಂತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.