ADVERTISEMENT

ವಿಶ್ವಸಂಸ್ಥೆಯಲ್ಲಿ ಭಾರತದ 25 ಯುವ ಚೇಂಜ್‌ಮೇಕರ್‌ಗಳು: ಜಾಗತಿಕ ಸವಾಲುಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 10:28 IST
Last Updated 3 ಡಿಸೆಂಬರ್ 2024, 10:28 IST
<div class="paragraphs"><p>ವಿಶ್ವಸಂಸ್ಥೆ&nbsp; (ಸಂಗ್ರಹ ಚಿತ್ರ)</p></div>

ವಿಶ್ವಸಂಸ್ಥೆ  (ಸಂಗ್ರಹ ಚಿತ್ರ)

   

ನವದೆಹಲಿ: ಜಗತ್ತು ಎದುರಿಸುತ್ತಿರುವ ಕಠಿಣ ಸವಾಲುಗಳ ಕುರಿತು ಭಾರತದ 25 ಯುವ ಚೇಂಜ್‌ ಮೇಕರ್‌ಗಳು ವಿಶ್ವಸಂಸ್ಥೆಯಲ್ಲಿ ತಮ್ಮ ಯೋಜನೆಗಳನ್ನು ಮಂಡಿಸಲಿದ್ದಾರೆ. 

ಡಿ. 12ರಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಆಯೋಜನೆಗೊಂಡಿರುವ 8ನೇ ವಾರ್ಷಿಕ ಸಮಾವೇಶದಲ್ಲಿ 1ಎಂ1ಬಿ ಪ್ರತಿಷ್ಠಾನದ ಚರ್ಚೆಯಲ್ಲಿ ಭಾರತದ ಈ ಯುವ ಚೇಂಜ್‌ ಮೇಕರ್‌ಗಳು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಸಾಮಾಜಿಕ ಬದಲಾವಣೆಯಲ್ಲಿ ತಂತ್ರಜ್ಞಾನ, ಸುಸ್ಥಿರತೆ, ಹಸಿರು ಕೌಶಲ ಸೇರಿದಂತೆ ಹಲವು ವಿಷಯಗಳ ಕುರಿತು ಇಲ್ಲಿ ಚರ್ಚೆಗಳು ನಡೆಯಲಿವೆ. ಇದರಲ್ಲಿ ನೊಯ್ಡಾದ 14 ವರ್ಷದ ಫತೇ ಬಚ್ಚರ್‌ ಅವರು ‘ಎಕೊ– ಕ್ಲೀನ್‌’ ಎಂಬ ವಿಷಯದಲ್ಲಿ ನಗರ ಪ್ರದೇಶದ ನೀರಿನ ಸಮಸ್ಯೆ ಹಾಗೂ ಶುಚಿತ್ವದ ಕುರಿತು ಮಾತನಾಡಲಿದ್ದಾರೆ.

ಮುಂಬೈನ 16 ವರ್ಷದ ಸಿದ್ಧಾಂತ ಗುಬ್ಬಿ ಹಾಗೂ ಸುಹಾನಿ ಪ್ರಕಾಶ್ ಅವರು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಸಮಸ್ಯೆ ದೂರವಾಗಿಸಲು ‘ಈನ್‌ಟೆಕ್‌’ ವಿಷಯ ಕುರಿತು ಮಾತನಾಡಲಿದ್ದಾರೆ. ಬೆಂಗಳೂರಿನ 15 ವರ್ಷದ ಮೃದುಲಾ ಶ್ರೀರಾಮ್‌ ಅವರು ಪ್ರತಿಯೊಬ್ಬರಿಗೂ ಭರತನಾಟ್ಯ ಸಿಗುವಂತೆ ಮಾಡುವ ಕುರಿತು ವಿಷಯ ಹಂಚಿಕೊಳ್ಳಲಿದ್ದರೆ.

ಹೈದರಾಬಾದ್‌ನ 14 ವರ್ಷದ ಸಿದ್ಧಾರ್ಥ ಮನ್ನೇಪಳ್ಳಿ ಅವರು ‘ಎಜುಟೆಕ್‌’ ಎಂಬ ಕಾರ್ಯಕ್ರಮದ ಮೂಲಕ ಅವಕಾಶವಂಚಿತ ಸಮುದಾಯಗಳಿಗೆ ಶಿಕ್ಷಣ ತಲುಪುವಂತೆ ಮಾಡುವ ತಂತ್ರಜ್ಞಾನ ಕುರಿತು ಹಾಗೂ ಅಶ್ಮಿತ್‌ ಟೈನಾವಾಲಾ ಅವರು ಸಮುದಾಯದ ಆರೋಗ್ಯ ವೃದ್ಧಿಗಾಗಿ ಯೋಜನೆ ಕುರಿತು ಮಾತನಾಡಲಿದ್ದಾರೆ.

‘ಕಳೆದ 8 ವರ್ಷಗಳಿಂದ 1ಎಂ1ಬಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಯುವ ಪಡೆಯು ಜಾಗತಿಕ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ ಬಂದಿವೆ. ಕೃತಕ ಬುದ್ಧಿಮತ್ತೆ ಹಾಗೂ ಹವಾಮಾನ ಕುರಿತು ಭಾರತದ ನಿವ್ವಳ ಶೂನ್ಯ ಗುರಿಯನ್ನು ಈಡೇರಿಸಲು ಮುಂಚೂಣಿಯಲ್ಲಿದ್ದಾರೆ’ ಎಂದು 1ಎಂ1ಬಿಯ ಸಂಸ್ಥಾಪಕ ಮಾನವ್ ಸುಬೋಧ್ ತಿಳಿಸಿದರು.

ಈ ಸಮಾವೇಶದಲ್ಲಿ ಜಾಗತಿಕ ಮಟ್ಟದ ರಾಜತಾಂತ್ರಿಕರು, ರಾಯಭಾರಿಗಳು, ಹಿರಿಯ ನಾಯಕರು, ವಿವಿಧ ಕಂಪನಿಗಳ ಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು, ವಿಶ್ವ ಸಂಸ್ಥೆಯ ಸಿಬ್ಬಂದಿ ಹಾಗೂ ನಾಗರಿಕ ಸಮಾಜದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.