ADVERTISEMENT

ಉದ್ಯೋಗ ಖಾತ್ರಿ ಕಾಪಾಡಿ, ಹಣ ಕೊಡಿ: ಪ್ರಧಾನಿಗೆ ಪತ್ರ ಬರೆದ ಮಾಜಿ ಮುಖ್ಯಮಂತ್ರಿಗಳು

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 3:08 IST
Last Updated 15 ಜನವರಿ 2019, 3:08 IST
   

ನವದೆಹಲಿ: ಮಾಜಿ ಮುಖ್ಯಮಂತ್ರಿಗಳು, ನಾಗರಿಕ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರೈತ ಸಂಘಟನೆಗಳ ನಾಯಕರೂ ಸೇರಿದಂತೆ ಒಟ್ಟು 250 ಮಂದಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದು ‘ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಬೇಡಿ’ ಎಂದು ಮನವಿ ಮಾಡಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಗಾಗಿ ಮೀಸಲಿಟ್ಟದ ಹಣದ ಶೇ99ರಷ್ಟು ಮೊತ್ತ ಜ.1ಕ್ಕೆ ಖಾಲಿಯಾಗಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಬಾಕಿಯಿರುವಾಗಲೇ ಉದ್ಯೋಗ ಖಾತ್ರಿಯ ತಿಜೋರಿ ಖಾಲಿಯಾಗಿರುವುದು ಆತಂಕ ಉಂಟು ಮಾಡಿದೆ.ಉದ್ಯೋಗ ಖಾತ್ರಿಗೆ ಬಲ ತುಂಬುವುದು ನಿಮ್ಮ ಆದ್ಯತೆಯಾಗಲಿ. ಪ್ರಸ್ತುತ ಗ್ರಾಮೀಣ ಸಮಾಜ ಮತ್ತು ಕೃಷಿಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಹಾರಕ್ಕೆ ಸರ್ಕಾರ ರೂಪಿಸುತ್ತಿರುವ ಕ್ರಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಬಲ ತುಂಬುವುದು ಅತ್ಯಗತ್ಯ ಎಂದು ಪತ್ರದಲ್ಲಿ ಹೇಳಲಾಗಿದೆ.

ಉದ್ಯೋಗಾವಕಾಶ ಸೃಷ್ಟಿಗೆ ನಿಮ್ಮ ಸರ್ಕಾರ ಸಾರ್ವಜನಿಕವಾಗಿ ಸಾಕಷ್ಟು ಭರವಸೆಗಳನ್ನು ಕೊಟ್ಟಿದೆ. ಆದರೆ ದೇಶದಲ್ಲಿ ಉದ್ಯೋಗದ ಭರವಸೆ ನೀಡುವ ಏಕೈಕ ಯೋಜನೆಯನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸಲಾಗುತ್ತಿದೆ, ಬಲಹೀನಗೊಳಿಸಲಾಗಿದೆ ಎನ್ನುವ ಸಂಗತಿಯನ್ನು ನಿಮ್ಮ ಗಮನಕ್ಕೆ ತರಲೇಬೇಕಾಗಿದೆ. ಬಜೆಟ್ ಒದಗಿಸುವ ಪ್ರಕ್ರಿಯೆಯಲ್ಲಿ ಅನಗತ್ಯ ಮತ್ತು ನಿಯಮಬಾಹಿರ ನಿಬಂಧನೆಗಳನ್ನು ಹೇರಲಾಗಿದೆ. ಪಾವತಿ ತಡವಾಗುತ್ತಿರುವುದು ಮತ್ತು ಕೂಲಿಯ ಮೊತ್ತ ಕಡಿಮೆಯಾಗುತ್ತಿರುವುದುಜನರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಬದುಕಿಗೆ ಆಸರೆ ನೀಡುವ ಕಾನೂನುಬದ್ಧ ವ್ಯವಸ್ಥೆ ಹಾಳಾಗುತ್ತಿದೆ ಎಂದು ಎಚ್ಚರಿಸಲಾಗಿದೆ.

ADVERTISEMENT

ಕೃಷಿ ಆದಾಯದ ಮೂಲಗಳು ಬತ್ತಿಹೋಗುತ್ತಿವೆ. ನಿರುದ್ಯೋಗ ಮತ್ತು ಅಸಮಾನತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಉದ್ಯೋಗ ಖಾತ್ರಿಯ ಬಜೆಟ್ ಮುಗಿದಿರುವುದು ಆತಂಕಕಾರಿ ಬೆಳವಣಿಗೆ. ಗ್ರಾಮೀಣ ಪ್ರದೇಶದಲ್ಲಿ ಬದುಕುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಉದ್ಯೋಗ ಖಾತ್ರಿಗೆ ಬಲ ತುಂಬುವ ಮೂಲಕ ಜನರ ಬದುಕು ರಕ್ಷಿಸಲು ಸರ್ಕಾರ ಮುಂದಾಗಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದು ಬಿಟ್ಟು ಸರ್ಕಾರವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಅಧಿಕಾರ ಆಕಾಂಕ್ಷಿಗಳ ಮಾತಿಗೆ ಮಣೆ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಗ್ರಾಮೀಣ ಪ್ರದೇಶದ ಬಿಕ್ಕಟ್ಟು ಮತ್ತು ಉದ್ಯೋಗ ಖಾತ್ರಿಗೆ ಇರುವ ಸಂಭಾವ್ಯ ಆತಂಕಗಳ ಬಗ್ಗೆ ಚರ್ಚಿಸಲು ಸಭೆ ಸೇರಿದ್ದ ರಾಜಕಾರಿಣಿಗಳು, ಹೋರಾಟಗಾರರು ಮತ್ತು ನಾಗರಿಕ ಸೇವಾ ಸಮಿತಿ ಸದಸ್ಯರು ಸಭೆಯ ನಂತರ ಪ್ರಧಾನಿಗೆ ಪತ್ರ ಬರೆದರು. ಸಹಿ ಹಾಕಿರುವ ಪ್ರಮುಖರಲ್ಲಿ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್, ಕಲಾವಿದೆ ಮಲ್ಲಿಕಾ ಸಾರಾಭಾಯ್, ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಖಿಲ್ ಡೇ, ಸಿಪಿಎಂನ ಸೀತಾರಾಮ್ ಯೆಚೂರಿ, ಮಾಜಿ ಮುಖ್ಯಮಂತ್ರಿಗಳಾದ ಪೃಥ್ವಿರಾಜ್ ಚೌಹಾಣ್, ದೀಪೆಂದರ್ ಸಿಂಗ್ ಹೂಡಾ, ದಿಗ್ವಿಜಯ್ ಸಿಂಗ್, ನಾಗರಿಕ ಹೋರಾಟಗಾರರಾದ ಜಿಗ್ನೇಶ್ ಮೇವಾನಿ, ಯೋಗೇಂದ್ರ ಯಾದವ್, ಪ್ರಾಧ್ಯಾಪಕಿ ಜಯತಿ ಘೋಷ್ ಮತ್ತು ಹೋರಾಟಗಾರ್ತಿ ಅರುಂಧತಿ ರಾಯ್ ಸೇರಿದ್ದಾರೆ.

ನಮ್ಮ ದೇಶದ ಕೋಟ್ಯಂತರ ಗ್ರಾಮೀಣ ಜನರ ಪರವಾಗಿ ಈ ಪತ್ರ ಬರೆದಿದ್ದೇವೆ. ಉದ್ಯೋಗ ಖಾತ್ರಿ ಯೋಜನೆಗೆ ಬಲ ತುಂಬಬೇಕು ಎನ್ನುವ ಭಾವನೆ ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.