ADVERTISEMENT

ಕಾಶ್ಮೀರದಲ್ಲಿ ಕುದಿಮೌನ: ಸೇನಾ ಮುಖ್ಯಸ್ಥರ ಭೇಟಿ, ಅಮರನಾಥ ಯಾತ್ರೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:25 IST
Last Updated 7 ಆಗಸ್ಟ್ 2019, 5:25 IST
ಕಾಶ್ಮೀರದ ದಾಲ್‌ ಸರೋಪರ. (ಎಎಫ್‌ಪಿ ಚಿತ್ರ)
ಕಾಶ್ಮೀರದ ದಾಲ್‌ ಸರೋಪರ. (ಎಎಫ್‌ಪಿ ಚಿತ್ರ)   

ಶ್ರೀನಗರ: ಕಾಶ್ಮೀರದಲ್ಲಿ ಈಗಾಗಲೇ ಇರುವ ಭದ್ರತಾ ಸಿಬ್ಬಂದಿಯ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 25 ಸಾವಿರ ಕೇಂದ್ರಸಶಸ್ತ್ರ ಪಡೆ ಸಿಬ್ಬಂದಿಯನ್ನು ರವಾನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ವಾರವಷ್ಟೇ 10 ಸಾವಿರ ಪ್ಯಾರಾ ಮಿಲಿಟರಿ ಸಿಬ್ಬಂದಿಯನ್ನು ಕಣಿವೆ ರಾಜ್ಯಕ್ಕೆನಿಯೋಜಿಸಲಾಗಿತ್ತು.

ಗುರುವಾರ ಮುಂಜಾನೆಯಿಂದಲೇ ಕಾಶ್ಮೀರಕ್ಕೆ ಬರುತ್ತಿರುವ ಕೇಂದ್ರಸಶಸ್ತ್ರಪಡೆಗಳ ಸಿಬ್ಬಂದಿಗಳನ್ನು ರಾಜ್ಯದ ವಿವಿಧೆಡೆ ಇರುವ ನೆಲೆಗಳಿಗೆ ನಿಯೋಜಿಸುವ ಕೆಲಸ ಆರಂಭವಾಗಿವೆ.ಕಾಶ್ಮೀರದಲ್ಲಿ ಭದ್ರತಾ ಪಡೆಗಳ ನಿಯೋಜನೆಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಸಾಕಷ್ಟು ಊಹಾಪೋಹಗಳನ್ನು ಹುಟ್ಟುಹಾಕಿದೆ.

ADVERTISEMENT

ಭದ್ರತಾ ಪಡೆಗಳ ಸಿದ್ಧತೆಯನ್ನು ಪರಿಶೀಲಿಸಲೆಂದುಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗುರುವಾರ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಕಾಶ್ಮೀರ ಕಣಿವೆಯಲ್ಲಿ ರಾವತ್ ಇನ್ನೂ ಎರಡು ದಿನ ಉಳಿಯಲಿದ್ದಾರೆ.

ಭಯೋತ್ಪಾದಕರ ವಿರುದ್ಧ ಹೋರಾಟಕ್ಕೆ ಬಲ ತುಂಬಲು ಹೆಚ್ಚುವರಿಯಾಗಿ 100 ಕಂಪನಿಗಳನ್ನು (ಪ್ರತಿ ಕಂಪನಿಯಲ್ಲಿ 100 ಜನ) ನಿಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿತ್ತು. ಕಳೆದ ವಾರ ಕಾಶ್ಮೀರಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ಭೇಟಿ ನಂತರ ಕೇಂದ್ರದ ಈ ಮಹತ್ವದ ನಿರ್ಧಾರ ಹೊರಬಿದ್ದಿತ್ತು.

ಉತ್ತರ ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಹೆಚ್ಚುವರಿ ಪಡೆಗಳ ನಿಯೋಜನೆ ಅಗತ್ಯವಾಗಿತ್ತು ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಆದರೆ, ಕಾಶ್ಮೀರದಲ್ಲಿ ಭದ್ರತಾ ಪಡೆಗಳ ನಿಯೋಜನೆಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ, ಹೊರ ರಾಜ್ಯಗಳ ಜನರಿಗೆ ಕಾಶ್ಮೀರದಲ್ಲಿ ಆಸ್ತಿ ಖರೀದಿಯನ್ನು ನಿರಾಕರಿಸುವ ಸಂವಿಧಾನದ 35ಎ ವಿಧಿಯ ಸುತ್ತ ಮತ್ತೊಮ್ಮೆ ಚರ್ಚೆಗಳು ಗರಿಗೆದರಿವೆ. ಕಳೆದ ಬುಧವಾರವಷ್ಟೇ ‘35ಎ ವಿಧಿಯನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವ ನಮ್ಮ ಎದುರು ಇಲ್ಲ’ ಎಂದು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದರು.

ಈ ನಡುವೆ ಅಮರನಾಥ ಯಾತ್ರೆಯನ್ನು ಆಗಸ್ಟ್ 4ರವರೆಗೆ ಮುಂದೂಡಲಾಗಿದೆ. ಹವಾಮಾನ ವೈಪರಿತ್ಯ ಇದಕ್ಕೆ ಕಾರಣ ಎಂದು ಸರ್ಕಾರ ಹೇಳುತ್ತಿದೆ. ಆದರೆ ಹವಾಮಾನ ಇಲಾಖೆಯು ಮುಂದಿನ ಕೆಲ ದಿನಗಳವರೆಗೆ ಹವಾಮಾನದಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ. ಅಮರನಾಥ ಯಾತ್ರೆಗೆ ನಿಯೋಜಿಸಿದ್ದ 40 ಸಾವಿರ ಭದ್ರತಾ ಸಿಬ್ಬಂದಿಯನ್ನೂ ಕಾನೂನು ಸುವ್ಯವಸ್ಥೆ ಕಾಪಾಡಲು ಮರು ನಿಯೋಜನೆ ಮಾಡಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಕಾಶ್ಮೀರದಲ್ಲಿರುವ ಎಲ್ಲ ಭದ್ರತಾ ತುಕಡಿಗಳಿಗೂ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ನಿರ್ದೇಶನ ನೀಡಲಾಗಿದೆ.

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಿನ್ನೆಯಷ್ಟೇ(ಗುರುವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಇದೇ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಸುವಂತೆ ಮತ್ತು ಕಣಿವೆಯಲ್ಲಿ ಉದ್ವಿಗ್ನತೆ ಶಮನ ಮಾಡುವಂತೆವಿನಂತಿಸಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.