ADVERTISEMENT

ಬೆಂಗಳೂರು ಐಟಿ ಕಂಪನಿ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ

ಪಿಟಿಐ
Published 23 ಅಕ್ಟೋಬರ್ 2022, 4:01 IST
Last Updated 23 ಅಕ್ಟೋಬರ್ 2022, 4:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಯ್‌ಬಸಾ: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯಲ್ಲಿ 26 ವರ್ಷದ ಮಹಿಳೆ ಮೇಲೆ ಸುಮಾರು 10 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಮಹಿಳೆಯು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯು ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದ್ದರಿಂದಾಗಿ ಊರಿಗೆ ತೆರಳಿದ್ದರು.

‘ಮಹಿಳೆಯು ಗುರುವಾರ ಸಂಜೆ ಸ್ನೇಹಿತನ ಜೊತೆ ದ್ವಿಚಕ್ರ ವಾಹನದಲ್ಲಿ ಹಳೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ 8 ರಿಂದ 10 ಮಂದಿಯ ಗುಂಪು ಅವರಿಬ್ಬರನ್ನು ತಡೆದು ಸ್ನೇಹಿತನನ್ನು ಥಳಿಸಿತ್ತು. ಬಳಿಕ ಮಹಿಳೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಇದೆ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

'ಅತ್ಯಾಚಾರದ ಬಳಿಕ ಆರೋಪಿಗಳು ತನ್ನ ಮೊಬೈಲ್‌ ಮತ್ತು ಪರ್ಸ್‌ ತೆಗೆದುಕೊಂಡು ಪರಾರಿಯಾದರು. ಬಳಿಕ ತಾನು ಮನೆಗೆ ಬಂದು ನಡೆದುದನ್ನು ಕುಟುಂಬದವರಿಗೆ ತಿಳಿಸಿದೆ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ. ಸಾದರ್ ಆಸ್ಪತ್ರೆಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದೂ ಮಾಹಿತಿ ನೀಡಿದ್ದಾರೆ.

‘ಘಟನೆ ಸಂಬಂಧ ಮುಫಾಸಿಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆಶುತೋಷ್‌ ಶೇಖರ್‌ ತಿಳಿಸಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ’ ಎಂದು ಸಾದರ್‌ ವಿಭಾಗೀಯ ಪೊಲೀಸ್‌ ಅಧಿಕಾರಿ ದಿಲೀಪ್‌ ಖಲ್ಕೊ ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ಬಿಜೆಪಿಯು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ರಾಜೀನಾಮೆಗೆ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.