ADVERTISEMENT

262 ಮಕ್ಕಳಿಗೆ ಕೋವಿಡ್‌ ದೃಢ, ಆಂತಕ ಪಡುವ ಅಗತ್ಯವಿಲ್ಲ: ಆಂಧ್ರ ಶಿಕ್ಷಣ ಇಲಾಖೆ

ಆಂಧ್ರಪ್ರದೇಶದಲ್ಲಿ ನ.2ರಿಂದ 9 ಮತ್ತು 10ನೇ ತರಗತಿಗಳು ಆರಂಭ

ಪಿಟಿಐ
Published 5 ನವೆಂಬರ್ 2020, 11:21 IST
Last Updated 5 ನವೆಂಬರ್ 2020, 11:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ: ಕೊರೊನಾ ಲಾಕ್‌ಡೌನ್‌ ನಂತರ ಆಂಧ್ರಪ್ರದೇಶದಲ್ಲಿ ನ.2 ರಿಂದ 9 ಮತ್ತು 10 ನೇ ತರಗತಿಯ ಮಕ್ಕಳಿಗೆ ಶಾಲೆಗಳು ಪುನರಾರಂಭವಾಗಿದ್ದು, ಈ ಮೂರು ದಿನಗಳಲ್ಲಿ ಸುಮಾರು 160 ಶಿಕ್ಷಕರು ಮತ್ತು 262 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

‘ಇದೇನೂ ಆತಂಕಪಡುವ ಸಂಗತಿಯಲ್ಲ. ಏಕೆಂದರೆ, ನಿನ್ನೆ (ನವೆಂಬರ್ 4) ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದಾರೆ. 262 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಶೇ 0.1ರಷ್ಟು ಮಕ್ಕಳಿಗೆ ಸೋಂಕು ತಗುಲಿದೆ. ಶಾಲೆ ತೆರೆದಿದ್ದರಿಂದಲೇ ಸೋಂಕು ತಗುಲಿದೆ ಎಂದು ಹೇಳಲಾಗುವುದಿಲ್ಲ‘ ಎಂದು ಶಾಲಾ ಶಿಕ್ಷಣ ಆಯುಕ್ತ ವಿ.ವಿ. ಚಿನ್ನಾ ವೀರಭದ್ರುಡು ತಿಳಿಸಿದರು.

‘ಪ್ರತಿ ಶಾಲೆಯಲ್ಲೂ ಕೋವಿಡ್‌ 19 ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ ಕುಳಿತುಕೊಳ್ಳಲು 15 ಅಥವಾ 16 ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡಲಾಗುತ್ತಿದೆ‘ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

ADVERTISEMENT

‘9 ಮತ್ತು 10ನೇ ತರಗತಿಯ 9.75 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, 3.93 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. 1.1 ಲಕ್ಷ ಶಿಕ್ಷಕರಲ್ಲಿ, 99 ಸಾವಿರ ಶಿಕ್ಷಕರು ಕೆಲಸಕ್ಕೆ ಹಾಜರಾಗಿದ್ದಾರೆ. ‘1.1 ಲಕ್ಷ ಶಿಕ್ಷಕರಲ್ಲಿ 160 ಶಿಕ್ಷಕರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ‘ ಎಂದು ಹೇಳಿದ ಆಯುಕ್ತ ವೀರಭದ್ರುಡು, ‘ನಮಗೆ ಮಕ್ಕಳು ಮತ್ತು ಶಿಕ್ಷಕರು, ಇಬ್ಬರ ಜೀವನವೂ ಮುಖ್ಯ‘ ಎಂದರು.

‘ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಕೊರೊನಾ ಸೋಂಕಿನ ಬಗ್ಗೆ ಹೆದರಿಕೆ ಇರುವುದರಿಂದ, ಶಾಲೆಯಲ್ಲಿ ಮಕ್ಕಳ ಹಾಜರಾತಿ ಶೇ 40ರಷ್ಟಿದೆ'ಎಂದು ವೀರಭದ್ರುಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.