ADVERTISEMENT

275 ಕಸ್ಟಡಿ ಅತ್ಯಾಚಾರ ಪ್ರಕರಣ ದಾಖಲು | ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ: NCRB

ಪಿಟಿಐ
Published 25 ಫೆಬ್ರುವರಿ 2024, 10:57 IST
Last Updated 25 ಫೆಬ್ರುವರಿ 2024, 10:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: 2017 ರಿಂದ 2022 ರವರೆಗೆ 270ಕ್ಕೂ ಹೆಚ್ಚು ಕಸ್ಟಡಿ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ಅಂಕಿಅಂಶಗಳು ಬಹಿರಂಗ ಪಡಿಸಿವೆ. ಕಾನೂನು ಜಾರಿ ವ್ಯವಸ್ಥೆಗಳಲ್ಲಿ ಸಂವೇದನೆ ಮತ್ತು ಹೊಣೆಗಾರಿಕೆಯ ಕೊರತೆಯಿಂದಾಗಿ ಇಂತಹ ಘಟನೆಗಳು ನಡೆದಿವೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಅಪರಾಧಿಗಳಲ್ಲಿ ಪೊಲೀಸ್ ಸಿಬ್ಬಂದಿ, ಸಮಾಜ ಸೇವಕರು, ಸಶಸ್ತ್ರ ಪಡೆಗಳ ನೌಕರರು, ಜೈಲುಗಳು ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಸೇರಿದ್ದಾರೆ.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 2017ರಲ್ಲಿ 89 ಪ್ರಕರಣಗಳು, 2018ರಲ್ಲಿ 60, 2019ರಲ್ಲಿ 47, 2020ರಲ್ಲಿ 29, 2021ರಲ್ಲಿ 26 ಹಾಗೂ 2022ರಲ್ಲಿ 24 ಪ್ರಕರಣಗಳು ದಾಖಲಾಗಿವೆ ಎಂದು ಅಂಕಿ ಅಂಶಗಳು ಹೇಳಿವೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) ಅಡಿಯಲ್ಲಿ ಕಸ್ಟಡಿ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸೆಕ್ಷನ್‌ ಪೊಲೀಸ್ ಅಧಿಕಾರಿ, ಜೈಲರ್ ಅಥವಾ ಮಹಿಳೆಯ ಕಾನೂನುಬದ್ಧ ಪಾಲನೆ ಮಾಡಬೇಕಾದ ಯಾವುದೇ ವ್ಯಕ್ತಿ ಎಸಗಿದ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದೆ.

ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ:

2017ರಿಂದ ದಾಖಲಾದ 275 ಕಸ್ಟಡಿ ಅತ್ಯಾಚಾರ ಪ್ರಕರಣಗಳಲ್ಲಿ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 92 ಪ್ರಕರಣಗಳು ದಾಖಲಾಗಿವೆ. 2ನೇ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 43 ಪ್ರಕರಣಗಳು ದಾಖಲಾಗಿವೆ.

‘ಕಸ್ಟಡಿ ಪ್ರಕರಣಗಳಲ್ಲಿ ಅಪರಾಧಿಗಳು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ' ಎಂದು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಂ ಮುತ್ರೇಜಾ ಹೇಳಿದ್ದಾರೆ.

'ಕಳ್ಳಸಾಗಾಣಿಕೆ ಅಥವಾ ಕೌಟುಂಬಿಕ ಹಿಂಸಾಚಾರದಂತ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ರಕ್ಷಣೆಗಾಗಿ ಕಾನೂನಿನ ಮೊರೆ ಹೋದಾಗ ಅವರ ಅಸಹಾಯಕತೆಯನ್ನು ಬಳಸಿಕೊಂಡು, ರಕ್ಷಣೆಯ ನೆಪದಲ್ಲಿ ಎಸಗುವ ಕೃತ್ಯವನ್ನು ಈ ಪ್ರಕರಣಗಳು ಪ್ರತಿಬಿಂಬಿಸುತ್ತವೆ' ಎಂದು ಅವರು ಹೇಳಿದ್ದಾರೆ.

ಪಿತೃ ಪ್ರಧಾನ ಸಾಮಾಜಿಕ ನಿಯಮಗಳು ಮತ್ತು ಸಂತ್ರಸ್ತೆಯ ಮೇಲೆ ಬರುವ ಕಳಂಕಗಳು ಕಸ್ಟಡಿ ಅತ್ಯಾಚಾರಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ ಎಂದೂ ಪೂನಂ ಮುತ್ರೇಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.