ADVERTISEMENT

5 ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಾದ್ಯಂತ 2G ಇಂಟರ್‌ನೆಟ್ ಸೇವೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 4:39 IST
Last Updated 25 ಜನವರಿ 2020, 4:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಂಟರ್​​ನೆಟ್​​​ ಸ್ಥಗಿತಗೊಳಿಸಿದ 5 ತಿಂಗಳಿಗಿಂತಲೂ ಹೆಚ್ಚು ಕಾಲದ ಬಳಿಕ ಜಮ್ಮು ಕಾಶ್ಮೀರದಲ್ಲಿ ಶನಿವಾರದಿಂದ ಪೋಸ್ಟ್‌ಪೇಯ್ಡ್ ಮತ್ತು ಪ್ರೀಪೇಯ್ಡ್‌ ಫೋನ್‌ಗಳಲ್ಲಿನ 2G ಮೊಬೈಲ್​ ಇಂಟರ್​ನೆಟ್ ಸೇವೆಯನ್ನು ಪುನರಾರಂಭಿಸಲಾಗುತ್ತಿದೆ.ಆದರೆ ಜಮ್ಮು ಮತ್ತು ಕಾಶ್ಮೀರದ ಆಡಳಿತಾಂಗವು ಅನುಮೋದಿಸಿದ 301 ವೆಬ್‌ಸೈಟ್‌ಗಳಿಗಷ್ಟೇ ಭೇಟಿ ನೀಡಬಹುದು ಎಂದು ಅಧಿಕೃತ ಆದೇಶ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿರುವಂತೆ, ಜನವರಿ 25ರಿಂದ ಮೊಬೈಲ್‌ ಫೋನ್‌ಗಳಲ್ಲಿ 2G ವೇಗದ ಇಂಟರ್‌ನೆಟ್ ಅನ್ನು ಪುನಃಸ್ಥಾಪಿಸುವುದಾಗಿ ಹೇಳಿದೆ.

ಮೊಬೈಲ್​ ಇಂಟರ್​ನೆಟ್​ ಸೇವೆಯನ್ನು ಪಟ್ಟಿ ಮಾಡಲಾದ ವೆಬ್‌ಸೈಟ್‌ಗಳಿಗೆಮಾತ್ರ ಸೀಮಿತಗೊಳಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧ ಹಾಗೆಯೇ ಮುಂದುವರಿಯಲಿದೆ. ಪೋಸ್ಟ್‌ಪೇಯ್ಡ್ ಮತ್ತು ಪ್ರೀಪೇಯ್ಡ್ ಸಿಮ್ ಕಾರ್ಡ್‌ಗಳಲ್ಲಿ ಡೇಟಾ ಸೇವೆಗಳು ಲಭ್ಯವಿರುತ್ತದೆ ಎಂದು ಹೇಳಲಾಗಿದೆ.

ADVERTISEMENT

ಶುಕ್ರವಾರ ತಡವಾಗಿ ಹೊರಡಿಸಲಾದ ಗೃಹ ಇಲಾಖೆಯ ಆದೇಶದಲ್ಲಿ, ಕಣಿವೆ ರಾಜ್ಯದಲ್ಲಿ ಶ್ವೇತಪಟ್ಟಿ ಮಾಡಿದ ಸೈಟ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಮತ್ತು ಯಾವುದೇ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗೆ ಅನುಮತಿ ಇಲ್ಲ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಮೊದಲು ಜಮ್ಮುವಿನ 10 ಜಿಲ್ಲೆಗಳಲ್ಲಿ ಮತ್ತು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ, ಕುಪ್ವಾರ ಮತ್ತು ಬಂಡಿಪೊರಾದಲ್ಲಿ 2G ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಪುನಃಸ್ಥಾಪಿಸಲಾಗಿತ್ತು.

ಇದಲ್ಲದೆ ಕೇಂದ್ರಾಡಳಿತ ಪ್ರದೇಶದಾದ್ಯಂತ ಎಲ್ಲಾ ಪ್ರೇಪೇಯ್ಡ್ ಸಂಪರ್ಕಗಳಿಗೆ ಧ್ವನಿ ಕರೆ ಮತ್ತು ಎಸ್‌ಎಂಎಸ್ ಸೇವೆಗಳನ್ನು ಮರುಸ್ಥಾಪಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಈ ಹಿಂದೆ ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಆಗಸ್ಟ್​ 5ರಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸಿ ಲಡಾಕ್​ ಮತ್ತು ಜಮ್ಮು-ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ಬಳಿಕ ಎಲ್ಲ ಇಂಟರ್​​ನೆಟ್​​ ಮತ್ತು ಮೊಬೈಲ್​ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.