ADVERTISEMENT

ಎಲ್ಲರಿಗೂ ತ್ವರಿತವಾಗಿ ಕೊರೊನಾ ಲಸಿಕೆ ದೊರೆಯುವ ಮಾರ್ಗಸೂಚಿ ಸಿದ್ಧ –ಪ್ರಧಾನಿ ಮೋದಿ

ಏಜೆನ್ಸೀಸ್
Published 15 ಆಗಸ್ಟ್ 2020, 10:36 IST
Last Updated 15 ಆಗಸ್ಟ್ 2020, 10:36 IST
ಮೋದಿ
ಮೋದಿ   

ನವದೆಹಲಿ: ಭಾರತದಲ್ಲಿ ಮೂರು ಕೊರೊನಾ ವೈರಸ್ ಲಸಿಕೆಗಳು ವಿವಿಧ ಪ್ರಾಯೋಗಿಕ ಹಂತಗಳಲ್ಲಿದ್ದು ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಕೂಡಲೇ ಅಪಾರ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದರು.

ದೇಶದ 74ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇದೇ ವೇಳೆ ಹೊಸ ‘ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್’ಯೋಜನೆಯನ್ನು ಘೋಷಣೆ ಮಾಡಿದರು. ಇದರಡಿ ಪ್ರತಿಯೊಬ್ಬ ಭಾರತೀಯನಿಗೂ ಹೆಲ್ತ್ ಐಡಿ ನೀಡಲಾಗುವುದು. ಯೋಜನೆಯಿಂದ ಬಡವರಿಗೆ ಪ್ರಯೋಜನವಾಗಲಿದೆ. ವೈದ್ಯರು ಯಾವ ಔಷಧ ತೆಗದುಕೊಳ್ಳಲು ಸೂಚಿಸಿದ್ದಾರೆ, ಯಾವಾಗ ಅದನ್ನು ಸೂಚಿಸಲಾಗಿದೆ ಎಂಬ ಮಾಹಿತಿ ಜತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವ್ಯಕ್ತಿಯ ಹೆಲ್ತ್ ಐಡಿಗೆ ಲಿಂಕ್ ಆಗಿರಲಿವೆ ಎಂದು ಹೇಳಿದರು.

ADVERTISEMENT

ಕೋವಿಡ್‌ನ ಮೂರು ಲಸಿಕೆಗಳು ವಿವಿಧ ಹಂತಗಳಲ್ಲಿವೆ. ವಿಜ್ಞಾನಿಗಳು ಒಪ್ಪಿಗೆ ಸೂಚಿಸಿದರೆ ನಾವು ಉತ್ಪಾದನೆಯ ಯೋಜನೆಯೊಂದನ್ನು ಸಿದ್ಧಮಾಡುತ್ತೇವೆ. ಲಸಿಕೆಯು ಪ್ರತಿಯೊಬ್ಬ ಭಾರತೀಯನಿಗೂ ಕಡಿಮೆ ಅವಧಿಯಲ್ಲಿ ಸಿಗುವಂತಹ ಮಾರ್ಗಸೂಚಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಮೋದಿ ಹೇಳಿದರು.

ದೇಶಾದ್ಯಂತ ವೈರಸ್ ಸೋಂಕು ಹೆಚ್ಚುತ್ತಿದ್ದು ಲಸಿಕೆಯನ್ನು ಉತ್ಪಾದಿಸಲು ಭಾರತ ಕೂಡ ಇತರೆ ದೇಶಗಳೊಮದಿಗೆ ಪೈಪೋಟಿ ನಡೆಸುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಮಾನ್ಯತೆ ಪಡೆದು ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್, ಝೈಡಸ್ ಕ್ಯಾಡಿಲಾ ಮತ್ತು ಸೀರಮ್ ಕಂಪನಿಯ ಮೂರು ಲಸಿಕೆಗಳ ಮಾನವನ ಮೇಲಿನ ಪ್ರಯೋಗ ಈಗಾಗಲೇ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.