ADVERTISEMENT

ಲೋಕಸಭೆ ಚುನಾವಣೆ ಸೋಲಿನ ಪರಿಣಾಮ: ಕಾಂಗ್ರೆಸ್‌ನಲ್ಲಿ ಮುಂದುವರಿದ ರಾಜೀನಾಮೆ ಪ‍ರ್ವ

ಈವರೆಗೆ ರಾಜ್ಯ ಘಟಕಗಳ ಆರು ಮಂದಿ ಅಧ್ಯಕ್ಷರಿಂದ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 28 ಮೇ 2019, 1:47 IST
Last Updated 28 ಮೇ 2019, 1:47 IST
   

ನವದೆಹಲಿ:ಲೋಕಸಭೆ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಕಾಂಗ್ರೆಸ್‌ನ ರಾಜ್ಯ ಘಟಕಗಳ ಅಧ್ಯಕ್ಷರ ಸಂಖ್ಯೆ ಆರಕ್ಕೆ ತಲುಪಿದೆ.

ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ರಾಜ್ ಬಬ್ಬರ್, ಒಡಿಶಾ ಘಟಕದ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಮತ್ತು ಮಹಾರಾಷ್ಟ್ರದ ಅಶೋಕ್ ಚವಾಣ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇವರ ಸಾಲಿಗೆ ಈಗಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸುನಿಲ್ ಜಾಖಡ್‌,ಜಾರ್ಖಂಡ್‌ ರಾಜ್ಯ ಘಟಕದ ಅಧ್ಯಕ್ಷ ಅಜಯ್‌ ಕುಮಾರ್‌ ಮತ್ತು ಅಸ್ಸಾಂ ಘಟಕದ ಅಧ್ಯಕ್ಷ ರಿಪುನ್ ಬೋರಾ ಸೇರಿದ್ದಾರೆ.

‘ರಾಜ್ಯದಲ್ಲಿ ಪಕ್ಷದ ಸೋಲಿಗೆ ಕಾರಣವೇನೇ ಇರಬಹುದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿರಿಪುನ್ ಬೋರಾ ಉಲ್ಲೇಖಿಸಿದ್ದಾರೆ.

ಈ ಮಧ್ಯೆ,ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆಗಾರಿಕೆ ಹೊತ್ತು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮತ್ತು ಎಐಸಿಸಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.ಹೈದರಾಬಾದ್‌ನ ಹಿರಿಯ ಕಾಂಗ್ರೆಸ್ ಮುಖಂಡ ಮರ್ರಿ ಶಶಿಧರ ರೆಡ್ಡಿ, ‘ರಾಜೀನಾಮೆ ಸಲ್ಲಿಸಿ ಕಾರ್ಯಕಾರಿ ಸಮಿತಿ ಪುನರ್ರಚನೆಗೆ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮುಕ್ತ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪಕ್ಷದ ಸೋಲಿಗೆ ರಾಹುಲ್ ಗಾಂಧಿ ಒಬ್ಬರೇ ಹೊಣೆಯಲ್ಲ. ಸಾಮೂಹಿಕವಾಗಿ ಎಲ್ಲರೂ ಹೊಣೆಗಾರರು. ಪಕ್ಷ ಹಲವು ರಾಜ್ಯಗಳಲ್ಲಿ ಸೋತಿದೆ. ಎಲ್ಲ ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು’ ಎಂದುಅಶೋಕ್ ಚವಾಣ್‌ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.