ADVERTISEMENT

ಶ್ರೀಲಂಕಾ ತಂಡದ ಕೃತ್ಯ: ತಮಿಳುನಾಡು ಮೀನುಗಾರರ ಮೇಲೆ ಹಲ್ಲೆ, ದರೋಡೆ

ಪಿಟಿಐ
Published 25 ಸೆಪ್ಟೆಂಬರ್ 2021, 6:46 IST
Last Updated 25 ಸೆಪ್ಟೆಂಬರ್ 2021, 6:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನಾಗಪಟ್ಟಣಂ (ತಮಿಳುನಾಡು): ಕೊಡಿಯಾಕಾರೈ ಕರಾವಳಿ ಪ್ರದೇಶದಲ್ಲಿ ಶ್ರೀಲಂಕಾದ ಮೀನುಗಾರರ ಗುಂಪೊಂದು ಶನಿವಾರ ಮುಂಜಾನೆ ಜಿಲ್ಲೆಯ ಮೂವರು ಮೀನುಗಾರರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ವಸ್ತುಗಳನ್ನು ದರೋಡೆ ಮಾಡಿದೆ.

ಹಲ್ಲೆಯಿಂದಾಗಿ ಮೂವರು ಮೀನುಗಾರರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ‌ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೇದಾರಣ್ಯಂ ಸಮೀಪದ ಅರಕೊಟ್ಟುತುರೈ ಹಳ್ಳಿಯ ಈ ಮೀನುಗಾರರು ‌ಶನಿವಾರ ಮುಂಜಾನೆ ಮೀನು ಹಿಡಿಯುವುದಕ್ಕಾಗಿ ಕೊಡಿಯಾಕಾರೈ ಕರಾವಳಿ ಪ್ರದೇಶಕ್ಕೆ ತೆರಳಿದ್ದರು. ಆಗ್ನೇಯ ದಿಕ್ಕಿನಲ್ಲಿ ಮೀನು ಹಿಡಿಯಲು ಬಲೆ ಬೀಸಿದಾಗ, ಶ್ರೀಲಂಕಾ ಮೀನುಗಾರರ ಗುಂಪು ಇವರ ಮೇಲೆ ದಾಳಿ ನಡೆಸಿದೆ ಎಂದು ‌ಕರಾವಳಿ ಭದ್ರತಾ ಪಡೆಯ (ಸಿಎಸ್‌ಜಿ) ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೂರು ದೋಣಿಗಳಲ್ಲಿ ಬಂದಿದ್ದ ಶ್ರೀಲಂಕಾ ಮೀನುಗಾರರು ಕಬ್ಬಿಣದ ಸರಳುಗಳಿಂದ ದಾಳಿ ಮಾಡಿದ್ದಾರೆ. ತಮಿಳುನಾಡಿನ ಮೀನುಗಾರರ ಬಳಿಯಿದ್ದ ಕ್ಯಾಚ್, ಮೀನು ಹಿಡಿಯುವ ಬಲೆಗಳು, ಮೊಬೈಲ್ ಫೋನ್‌ಗಳು, ಜಿಪಿಎಸ್ ಉಪಕರಣಗಳನ್ನು ದೋಚಿದ್ದಾರೆ ಎಂದು ‌ಸಿಎಸ್‌ಜಿ ಪೊಲೀಸರು ತಿಳಿಸಿದ್ದಾರೆ.

ಈ ದಾಳಿಯನ್ನು ಖಂಡಿಸಿಅರುಕೊಟ್ಟುತುರೈನಲ್ಲಿ ಮೀನುಗಾರರ ಸಂಘದ ಸದಸ್ಯರು ದಿಢೀರ್‌ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.