ADVERTISEMENT

ಕಾಶ್ಮೀರ: ಬಂಧಿತರ ಬಿಡುಗಡೆ ಮಾತಿಲ್ಲ, ಸಾಮಾನ್ಯ ಸ್ಥಿತಿಗೆ ಮರಳದ ಜನಜೀವನ

ಮೂರು ವಾರ ಕಳೆದರೂ ಸಡಿಲವಾಗದ ಕಡುಭದ್ರತೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 19:45 IST
Last Updated 23 ಆಗಸ್ಟ್ 2019, 19:45 IST
ವಿಶೇಷಾಧಿಕಾರ ತೆಗೆದುಹಾಕಿದ್ದರ ವಿರುದ್ಧ ಶ್ರೀನಗರದಲ್ಲಿ ಮಹಿಳೆಯರು ಶುಕ್ರವಾರ ಭಾರಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ವಿಶೇಷಾಧಿಕಾರ ತೆಗೆದುಹಾಕಿದ್ದರ ವಿರುದ್ಧ ಶ್ರೀನಗರದಲ್ಲಿ ಮಹಿಳೆಯರು ಶುಕ್ರವಾರ ಭಾರಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿ ಕಾರವನ್ನು ತೆರವು ಮಾಡುವುದಕ್ಕೂ ಮುನ್ನ ಭದ್ರತಾ ಸಿಬ್ಬಂದಿಯುಅಲ್ಲಿನ ರಾಜಕೀಯ ನಾಯಕರನ್ನು ಬಂಧಿಸಿ ದ್ದರು. ಬಂಧನದ ನಂತರ ಮೂರು ವಾರ ಕಳೆದರೂ ಈ ನಾಯಕರ ಬಿಡು ಗಡೆಯ ಬಗ್ಗೆ ಸುಳಿವೇ ಇಲ್ಲ.

ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಆಗಸ್ಟ್ 4–5ರ ಮಧ್ಯರಾತ್ರಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ನಂತರ ಅವರನ್ನು ಬಂಧಿಸಿ, ಅಜ್ಞಾತ ಸ್ಥಳಗಳಲ್ಲಿ ಇರಿಸಲಾಗಿದೆ. ಆದರೆ ಈವರೆಗೆ ಈ ನಾಯಕರನ್ನು ಬಿಡುಗಡೆ ಮಾಡುವ ಸಂಬಂಧ ಸರ್ಕಾರ ಏನನ್ನೂ ಹೇಳುತ್ತಿಲ್ಲ.

ಈ ನಾಯಕರನ್ನು ಹೊರತುಪಡಿಸಿ ಸಾವಿರಾರು ಮಂದಿಯನ್ನು ಬಂಧಿಸ ಲಾಗಿದೆ. ಆದರೆ ಹೀಗೆ ಬಂಧನಕ್ಕೆ ಒಳಗಾದವರ ಸಂಖ್ಯೆಯ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. 2,000 ಜನರನ್ನು ಹೀಗೆ ಬಂಧಿಸಲಾಗಿದೆ ಎಂದು ಒಂದು ಮೂಲವು ಹೇಳುತ್ತದೆ. ಆದರೆ 4,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಇನ್ನೊಂದು ಮೂಲವು ಮಾಹಿತಿ ನೀಡಿದೆ. ಹೀಗೆ ಬಂಧನವಾದವರೂ ಬಿಡುಗಡೆಯಾಗಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಮತ್ತೆ ನಿರ್ಬಂಧ:ಹಿಂದಿನ ವಾರ ಕಾಶ್ಮೀರ ಕಣಿವೆಯ ಹಲವೆಡೆ ನಿರ್ಬಂಧವನ್ನು ಸಡಿಲಿಸಲಾಗಿತ್ತು. ಆದರೆ ಗುರುವಾರ ಸಂಜೆಯ ನಂತರ ಮತ್ತೆ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಮೂಲಗಳು ಹೇಳಿವೆ.ಶ್ರೀನಗರದಲ್ಲಿ ಗುರುವಾರ ಸಂಜೆ ಜನರು ಪ್ರತಿಭಟನೆಗೆ ಮುಂದಾಗಿದ್ದರು. ಅವರನ್ನು ತಡೆಯಲು ಭದ್ರತಾ ಸಿಬ್ಬಂದಿ ಮುಂದಾದರು. ಆಗ ಜನರು ಭದ್ರತಾ ಸಿಬ್ಬಂದಿಯತ್ತ ಕಲ್ಲುತೂರಿದರು. ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಷೆಲ್ ಸಿಡಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೊಬೈಲ್‌ ಇಲ್ಲದೆ ಗೂಢಚರ್ಯೆ ಸ್ಥಗಿತ

ಮೊಬೈಲ್‌ ಮತ್ತು ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಗೂಢಚರ್ಯೆ ನಡೆಸಲು ಭಾರಿ ತೊಡಕಾಗಿದೆ. ಇದರಿಂದ ಉಗ್ರರ ವಿರುದ್ಧದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಭದ್ರತಾ ಮೂಲಗಳು ಹೇಳಿವೆ.

ಈ ಮೊದಲು ಮೊಬೈಲ್‌ ಮತ್ತು ಅಂತರ್ಜಾಲ ಬಳಕೆಯನ್ನು ಆಧರಿಸಿ ಉಗ್ರರ ಚಲನವಲನಗಳ ಮೇಲೆ ನಿಗಾ ಇರಿಸಲಾಗುತ್ತಿತ್ತು. ಮೊಬೈಲ್‌ ಇಲ್ಲದ ಕಾರಣ ಈಗ ಈ ಸಾಧ್ಯತೆಯೇ ಇಲ್ಲ. ಇನ್ನು ಮೊಬೈಲ್ ಇಲ್ಲದ ಕಾರಣ ಮಾಹಿತಿದಾರರು ನಮ್ಮನ್ನು ಸಂಪರ್ಕಿಸಲು ಆಗುತ್ತಿಲ್ಲ. ಹೀಗಾಗಿ ಉಗ್ರರ ಚಲನವಲನದ ಬಗ್ಗೆ ಸುಳಿವೇ ಸಿಗುತ್ತಿಲ್ಲ. ಇದು ತೀರಾ ಅಪಾಯಕಾರಿ ಎಂದು ಭದ್ರತಾ ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಧ್ಯಸ್ಥಿಕೆಗೆ ಟ್ರಂಪ್ ಆಸಕ್ತಿ

ವಾಷಿಂಗ್ಟನ್ (ಪಿಟಿಐ): ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನಗಳು ನೆರವು ಕೇಳಿದರೆ, ನೆರವು ನೀಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸಿದ್ಧರಿದ್ದಾರೆ ಎಂದು ಅಮೆರಿಕದ ಶ್ವೇತಭವನದ ಮೂಲಗಳು ಹೇಳಿವೆ.

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಡೊನಾಲ್ಡ್‌ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ‘ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಯಾವ ಕ್ರಮ ತೆಗೆದುಕೊಳ್ಳುತ್ತೀರಿ ಮತ್ತು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಕಾಶ್ಮೀರಿ ಜನರ ಮಾನವ ಹಕ್ಕುಗಳನ್ನು ಹೇಗೆ ಎತ್ತಿಹಿಡಿಯುತ್ತದೆ’ ಎಂಬ ಪ್ರಶ್ನೆಗಳನ್ನು ಟ್ರಂಪ್ ಅವರು ಮೋದಿ ಅವರ ಮುಂದೆ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

* ಭಾರತ–ಪಾಕಿಸ್ತಾನ ದ್ವಿಪಕ್ಷೀಯವಾಗಿಯೇ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಮೂರನೆಯವರು ಇದರಲ್ಲಿ ತಲೆ ಹಾಕಬಾರದು. ಇದೇ ನಮ್ಮ ನಿಲುವು

–ಇಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.