ADVERTISEMENT

ದೆಹಲಿ: ಕೊರೊನಾದಿಂದ ಚೇತರಿಸಿದ 350 ತಬ್ಲೀಗಿಗಳಿಂದ ಪ್ಲಾಸ್ಮಾ ದಾನಕ್ಕೆ ಒಲವು

ಏಜೆನ್ಸೀಸ್
Published 28 ಏಪ್ರಿಲ್ 2020, 6:38 IST
Last Updated 28 ಏಪ್ರಿಲ್ 2020, 6:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾಗಿರುವ ಸುಮಾರು 350 ತಬ್ಲೀಗಿ ಜಮಾತ್ ಸದಸ್ಯರು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ. ಈವರೆಗೆ 25 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ ಎಂದು ವರದಿಯಾಗಿದೆ.

ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದವರು ದೆಹಲಿಯ ಸುಲ್ತನ್‌ಪುರಿ ಮತ್ತು ನರೇಲಾ ಕ್ವಾರಂಟೈನ್ ಕೇಂದ್ರಗಳಲ್ಲಿ ಕೊರೊನಾದಿಂದ ಗುಣಮುಖರಾದವರು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸಹ ಸೋಮವಾರ ರಾತ್ರಿ ಈ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದ್ದರು.

ತಬ್ಲೀಗಿ ಜಮಾತ್‌ನಲ್ಲಿ ಭಾಗವಹಿಸಿ ಕೊರೊನಾ ತಗುಲಿದ್ದ, ಸುಲ್ತನ್‌ಪುರಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ತಮಿಳುನಾಡಿನ ವ್ಯಕ್ತಿಯೊಬ್ಬರು ಈಗಾಗಲೇ ಪ್ಲಾಸ್ಮಾ ದಾನ ಮಾಡಿದ್ದಾರೆ. ‘ಬೇರೆಯವರ ಜೀವ ರಕ್ಷಿಸುವ ಸಲುವಾಗಿ ಮಾನವೀಯತೆಯ ದೃಷ್ಟಿಯಿಂದ ಪ್ಲಾಸ್ಮಾ ದಾನ ಮಾಡಿದ್ದೇನೆ. ನನ್ನಂತೆಯೇ ಕೊರೊನಾದಿಂದ ಗುಣಮುಖರಾದ ಅನೇಕರು ದಾನ ಮಾಡಲು ಮುಂದೆ ಬರುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ದೆಹಲಿಯ ನಿಜಾಮುದ್ದೀನ್‌ನ ಮಸೀದಿಯಿಂದ ತೆರವುಗೊಳಿಸಲಾದ 2,300 ಜನರ ಪೈಕಿ 1,080 ಜನರಿಗೆ ಸೋಂಕು ತಗುಲಿದೆ. ಈ ಪೈಕಿ ಹಲವರು ಚೇತರಿಸಿಕೊಂಡಿದ್ದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಸೋಂಕಿನಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದಾನ ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಇತ್ತೀಚೆಗೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.