ADVERTISEMENT

ಚೆನ್ನೈನಲ್ಲಿ ಘರ್ಷಣೆಗೆ ತಿರುಗಿದ ಸಿಎಎ ಹೋರಾಟ: ಪೊಲೀಸರು, ಹೋರಾಟಗಾರರಿಗೆ ಗಾಯ 

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 7:25 IST
Last Updated 15 ಫೆಬ್ರುವರಿ 2020, 7:25 IST
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚೆನ್ನೈನಲ್ಲಿ ನಡೆದ ಪ್ರತಿಭಟನೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚೆನ್ನೈನಲ್ಲಿ ನಡೆದ ಪ್ರತಿಭಟನೆ    

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತಮಿಳುನಾಡಿನ ಚೆನ್ನೈನಲ್ಲಿ ನಡೆಯುತ್ತಿದ್ದ ಹೋರಾಟ ಶುಕ್ರವಾರ ರಾತ್ರಿ ಘರ್ಷಣೆಗೆ ತಿರುಗಿದೆ. ಘಟನೆಯಲ್ಲಿ ನಾಲ್ವರು ಪೊಲೀಸ್‌ ಆಧಿಕಾರಿ, ಸಿಬ್ಬಂದಿ ಮತ್ತು ಹೋರಾಟಗಾರರಿಗೆ ಗಾಯಗಳಾಗಿವೆ.

ಚೆನ್ನೈನ ವಾಷರ್‌ಮನ್‌ಪೇಟ್‌ ಎಂಬಲ್ಲಿ ಮುಸ್ಲಿಂ ಸಂಘಟನೆಗಳು ನಡೆಸುತ್ತಿದ್ದ ಹೋರಾಟವನ್ನು ಪೊಲೀಸರು ಬಲವಂತವಾಗಿ ಹಿಮ್ಮೆಟ್ಟಿಸಲು ಪ್ರಯತ್ನಿಸಿದರೆನ್ನಲಾಗಿದೆ. ಇದಕ್ಕಾಗಿ ಲಾಠಿ ಚಾರ್ಜ್‌ ಮಾಡಲಾಗಿದೆ. ಇದರಿಂದ ಉದ್ವಿಗ್ನಗೊಂಡ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಈ ವೇಳೆ ಪೊಲೀಸ್‌ ಜಂಟಿ ಆಯುಕ್ತೆ ವಿಜಯಕುಮಾರಿ, ಇಬ್ಬರು ಮಹಿಳಾ ಪೊಲೀಸ್ ಪೇದೆಗಳು ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇತ್ತ ಹೋರಾಟಗಾರರಲ್ಲಿ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅವರ ನಿಖರ ಮಾಹಿತಿ ಲಭ್ಯವಾಗಿಲ್ಲ.

ಈ ಘಟನೆ ಸದ್ಯ ತಮಿಳುನಾಡಿನಲ್ಲಿ ದೊಡ್ಡ ಹೋರಾಟಕ್ಕೆ ಕಾರಣವಾಗಿದ್ದು, ಪೊಲೀಸರು ಮತ್ತು ಸಿಎಎ ವಿರುದ್ಧ ರಾಜ್ಯಾದ್ಯಂತ ಹೋರಾಟಗಳು ಆರಂಭವಾಗಿವೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ADVERTISEMENT

ಘಟನೆ ಹಿನ್ನೆಲೆಯಲ್ಲಿ ಹಲವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದರು. ಬಂಧಿತರ ಬಿಡುಗಡೆಗಾಗಿ ಹೋರಾಟಗಾರರು ಪಟ್ಟು ಹಿಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿತ್ತು. ಚೆನ್ನೈನಗರ ಪೊಲೀಸ್‌ ಆಯುಕ್ತ ಎ.ಕೆ. ವಿಶ್ವನಾಥನ್‌ ಅವರು ಪ್ರತಿಭಟನಾ ನಿರತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿದರು. ಇದರ ಫಲವಾಗಿ ಬಂಧಿತರನ್ನು ಬಿಡುಗಡೆ ಮಾಡಲಾಯಯಿತು.

ಪ್ರತಿಭಟನಾಕಾರರು ಪೊಲೀಸರ ಮೇಲೆ ಲಾಠಿ ಪ್ರಹಾರ ನಡೆಸಿದರೆಂಬ ವಿಚಾರ ತಿಳಿಯುತ್ತಲೇ ರಾಜ್ಯದ ಹಲವು ನಗರಗಳಲ್ಲಿ ರಾತ್ರೋರಾತ್ರಿ ಪ್ರತಿಭಟನೆಗಳು ಆರಂಭವಾದವು. ಪರಿಣಾಮವಾಗಿ ದೂರದ ಊರುಗಳಿಗೆ ತೆರಳಬೇಕಾದ ಬಸ್‌ಗಳು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಹೆದ್ದಾರಿಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಈ ಕುರಿತು ಮಾತನಾಡಿರುವ ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ದಾಳಿಯನ್ನು ಖಂಡಿಸುತ್ತೇನೆ. ಬಂಧಿತರೆಲ್ಲರನ್ನೂ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಪ್ರಕರಣಗಳನ್ನು ಕೈಗಿಡಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.