ADVERTISEMENT

ಉತ್ತರ ಪ್ರದೇಶ: ಹಲ್ಲೆಕೋರರ ವಿರುದ್ಧ ಎನ್ಎಸ್‌ಎ ಅಸ್ತ್ರ, ಸರ್ಕಾರದ ಕಠಿಣ ಕ್ರಮ

ಮಧ್ಯಪ್ರದೇಶದಲ್ಲಿ ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 20:00 IST
Last Updated 3 ಏಪ್ರಿಲ್ 2020, 20:00 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಲಖನೌ:ಮಹಿಳಾ ನರ್ಸ್‌ಗಳ ಜತೆಗೆ ಅನುಚಿತ ವರ್ತನೆ, ಪೊಲೀಸರ ಮೇಲೆ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ತಬ್ಲೀಗ್ ಜಮಾತ್ ಸದಸ್ಯರ ಮೇಲೆ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್ಎ) ಮೊಕದ್ದಮೆ ದಾಖಲಿಸಿದೆ.

ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಈಚೆಗೆ ನಡೆದಿದ್ದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದವರನ್ನು ಇಲ್ಲಿನ ಗಾಜಿಯಾಬಾದ್‌
ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

‘ಕೆಲವರು ನಮ್ಮ ಜೊತೆ ಅನುಚಿತ, ಅಶ್ಲೀಲವಾಗಿ ವರ್ತಿಸಿದ್ದಾರೆ. ಅಶ್ಲೀಲ ಗೀತೆಗಳನ್ನು ಆಲಿಸುತ್ತಿದ್ದಾರೆ’ ಎಂದು ಕೆಲವು ಮಹಿಳಾ ನರ್ಸ್‌ಗಳು ದೂರು ನೀಡಿದ್ದರು.ಆಸ್ಪತ್ರೆ ಕಾರಿಡಾರ್‌ನಲ್ಲಿ ಆಗಾಗ್ಗೆ ಬೆತ್ತಲೆಯಾಗಿ ಓಡಾಡುತ್ತಾರೆ ಎಂದೂ ಆರೋಪಿಸಲಾಗಿತ್ತು.ಈ ಬೆಳವಣಿಗೆ ಹಿಂದೆಯೇ ಜಮಾತ್‌ ಸದಸ್ಯರು ಕ್ವಾರಂಟೈನ್‌ನಲ್ಲಿ ಇರುವ ಕಡೆಗೆ ಕೇವಲ ಪುರುಷ ನರ್ಸ್‌ಗಳನ್ನು ನಿಯೋಜಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ADVERTISEMENT

ಇನ್ನೊಂದು ಪ್ರಕರಣದಲ್ಲಿ ಸಾಮೂಹಿಕವಾಗಿ ನಮಾಜ್‌ ಮಾಡಬಾರದು ಎಂದು ಮನವೊಲಿಸಲು ಯತ್ನಿಸಿದ ಪ್ರಕರಣಗಳಲ್ಲಿ ಪೊಲೀಸರ ವಿರುದ್ಧವೇ ಕಲ್ಲು ತೂರಾಟ ನಡೆಸಿದ್ದವರ ಮೇಲೂ ಎನ್‌ಎಸ್ಎ ಅನ್ವಯ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ರಾಮಪುರ, ಮುಜಾಫರನಗರ, ಮೀರತ್‌, ಅಲಿಘರ ಜಿಲ್ಲೆಯಲ್ಲಿ ಇಂಥ ಘಟನೆಗಳು ನಡೆದಿದ್ದವು. ಕಲ್ಲು ತೂರಾಟದಿಂದ 12 ಮಂದಿ ಪೊಲೀಸರು ಗಾಯಗೊಂಡಿದ್ದರು.

ಧಾರಾವಿ: ಮತ್ತೊಬ್ಬರಿಗೆ ಸೋಂಕು ದೃಢ
ಮುಂಬೈ (ಪಿಟಿಐ): ಧಾರಾವಿ ಕೊಳೆಗೇರಿ ಮುಖ್ಯರಸ್ತೆಯಲ್ಲಿ ಕ್ಲಿನಿಕ್‌ ಹೊಂದಿದ್ದ 35 ವರ್ಷದ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ.

ಇದು ಕೊಳೆಗೇರಿಯಲ್ಲಿ ಸೋಂಕು ದೃಢಪಟ್ಟ 3ನೇ ಪ್ರಕರಣ. ಸೋಂಕಿಗೆ ಒಳಗಾದ ಈ ವೈದ್ಯರು ನಗರದ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲೂ ಕಾರ್ಯನಿರ್ವಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯರು ಇತ್ತೀಚೆಗೆ ಪ್ರಯಾಣ ಕೈಗೊಂಡಿರಲಿಲ್ಲ ಎನ್ನುವುದು ಗೊತ್ತಾಗಿದೆ. ಆದರೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ, ಅವರು ವಾಸವಿದ್ದ ಪ್ರದೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇವರ ಜತೆ ಸಂಪರ್ಕದಲ್ಲಿದ್ದವರ ಗುರುತು ಪತ್ತೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಇದಕ್ಕೆ ಮುನ್ನ ಧಾರಾವಿ ಕೊಳೆಗೇರಿಯ ಜವಳಿ ಮಳಿಗೆಯ ಮಾಲೀಕರೊಬ್ಬರು ಕೋವಿಡ್‌ನಿಂದ ಸತ್ತಿದ್ದರು. ಅಲ್ಲದೇ ಇಲ್ಲಿಗೆ ಸೇವೆಗೆ ನಿಯೋಜಿಸಲಾಗಿದ್ದ ಸ್ವೀಪರ್‌ ಒಬ್ಬರಿಗೂ ಸೋಂಕು ತಗುಲಿತ್ತು.

ಕಲ್ಲು ತೂರಾಟ ಪ್ರಕರಣ: ಆರು ಜನರ ವಶಕ್ಕೆ
ಇಂದೋರ್‌ (ಪಿಟಿಐ): ಇಲ್ಲಿನ ತಟಪಟ್ಟಿ ಬಖಲ್‌ನಲ್ಲಿ ಕಲ್ಲು ತೂರಾಟ ನಡೆಸಿದ್ದ ನಾಲ್ವರ ವಿರುದ್ಧ ಇಂದೋರ್‌ ಜಿಲ್ಲಾಡಳಿತ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಿಸಿದೆ.

ಘಟನೆಗೆ ಸಂಬಂಧಿಸಿ ಇನ್ನೂ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಂದೋರ್‌ನ ಛತ್ರಿಪುರ ಪೊಲೀಸ್ ಠಾಣಾಧಿಕಾರಿ ಕರಣ್‌ ಸಿಂಗ್ ತಿಳಿಸಿದ್ದಾರೆ. ಹಾಲಿ ಬಂಧಿತ ನಾಲ್ವರ ವಿರುದ್ಧ ಐಪಿಸಿ,ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ, ಕೋವಿಡ್ ಕುರಿತು ವದಂತಿ ಹಬ್ಬಿಸಿದ್ದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್‌–19 ರೋಗಿಯ ಸಂಬಂಧಿಕರನ್ನು ಕಡ್ಡಾಯ ಗೃಹವಾಸದಲ್ಲಿ ಇರಿಸುವ ಸಂಬಂಧ ತಟಪಟ್ಟಿ ಬಖಲ್‌ಗೆ ಆರೋಗ್ಯ ಇಲಾಖೆಯ ಐವರು ಸಿಬ್ಬಂದಿ ತೆರಳಿದ್ದರು. ಆಗ ಗುಂಪು ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಮಹಿಳಾ ವೈದ್ಯರು ಗಾಯಗೊಂಡಿದ್ದರು. ಈ ಸಂಬಂಧ ಪೊಲೀಸರು ಏಳು ಜನರನ್ನು ಬಂಧಿಸಿದ್ದರು. ಈ ಪೈಕಿ ನಾಲ್ವರ ವಿರುದ್ಧ ಎನ್‌ಎಸ್‌ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

*
ಜಮಾತ್‌ ಸದಸ್ಯರು ಮಾನವೀಯತೆಯ ವೈರಿಗಳು. ಕಾನೂನು ಪಾಲಿಸುವುದಿಲ್ಲ. ಇದು ಗಂಭೀರ ಅಪರಾಧ.
-ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ, ಉತ್ತರ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.