ADVERTISEMENT

ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆ ಸಂಬಂಧ 43 ಎಫ್‌ಐಆರ್ ದಾಖಲು: ಕೇಂದ್ರ ಸರ್ಕಾರ

ಏಜೆನ್ಸೀಸ್
Published 4 ಫೆಬ್ರುವರಿ 2021, 9:26 IST
Last Updated 4 ಫೆಬ್ರುವರಿ 2021, 9:26 IST
   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಗೆ ಸಂಬಂಧಿಸಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದು, 43 ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿಎನ್‌ ಪಟೇಲ್‌ ಹಾಗೂ ಜ್ಯೋತಿ ಸಿಂಗ್ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪ್ರತಿನಿಧಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಈ ಮಾಹಿತಿ ನೀಡಿದ್ದಾರೆ. ನಿಷೇದಿತ ಸಂಘಟನೆಯಾದ ಸಿಖ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಗಲಭೆಯಲ್ಲಿ ಭಾಗಿಯಾಗಿದೆ ಎಂದೂ ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನದಂದು ಹಿಂಸಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ನಡೆಸಿತು.

ADVERTISEMENT

ದೆಹಲಿ ನಿವಾಸಿಗಳಾದ ಶುಭಮ್‌ ಅವಸ್ಥಿ ಮತ್ತು ಇನ್ನಿಬ್ಬರು, ವಕೀಲ ವಿವೇಕ್‌ ನಾರಾಯನ್‌ ಶರ್ಮಾ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ್ದರು. ದೆಹಲಿ ಪೊಲೀಸರು ಅವರನ್ನು ತಡೆಯಲು ಯತ್ನಿಸಿದಾಗ ಪ್ರತಿಭಟನೆ ಹಿಂಸಾಚಾರದ ರೂಪ ಪಡೆದುಕೊಂಡಿತ್ತು.ಪ್ರತಿಭಟನಾ ನಿರತ ರೈತರು ಅದೇ ದಿನ ಕೆಂಪುಕೋಟೆಯ ಮೇಲೆ ಅನ್ಯ ಧ್ವಜ ಹಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.