ADVERTISEMENT

ಛತ್ತೀಸಗಡ: 9 ಮಹಿಳೆಯರು ಸೇರಿ 44 ಮಂದಿ ನಕ್ಸಲರು ಶರಣು

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 5:01 IST
Last Updated 2 ಜನವರಿ 2022, 5:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸುಕ್ಮಾ (ಛತ್ತೀಸಗಡ): ಛತ್ತೀಸಗಡದ ಸುಕ್ಮಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ 44 ಮಂದಿ ನಕ್ಸಲರು ಶರಣಾಗಿದ್ದಾರೆ. ಇವರಲ್ಲಿ 9 ಮಹಿಳೆಯರು ಸೇರಿದ್ದಾರೆ.

ಕೆಳ ಹಂತದಕೇಡರ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಇವರು ಇಲ್ಲಿನ ಚಿಂತಾಲ್​ನರ್​, ಕಿಸ್ಟಾರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ಸುಕ್ಮಾ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಸುನಿಲ್​ ಶರ್ಮಾ ತಿಳಿಸಿದ್ದಾರೆ.

ಶರಣಾಗಿರುವ ನಕ್ಸಲರು ಸುಕ್ಮಾ ಜಿಲ್ಲೆಯ ಕರಿಗುಂಡಮ್​ ಹಳ್ಳಿಯಲ್ಲಿ ತಾತ್ಕಾಲಿಕವಾಗಿನಿರ್ಮಾಣ ಮಾಡಿರುವ ಪೊಲೀಸ್‌ ಕ್ಯಾಂಪ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅವರಿಗೆ ಆಹಾರ, ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ADVERTISEMENT

44 ಮಂದಿ ನಕ್ಸಲರಲ್ಲಿ ಮಡ್ಕಮ್‌ ದುಲಾ ಎಂಬ ವ್ಯಕ್ತಿಗೆ ಸರ್ಕಾರ ₹ 2 ಲಕ್ಷ ಬಹುಮಾನ ಘೋಷಣೆ ಮಾಡಿತ್ತು. ಉಳಿದವರು ನಕ್ಸಲ್‌ ಸೇನಾ ಘಟಕ ಹಾಗೂ ಸಾಂಸ್ಕೃತಿಕ ಘಟಕದಲ್ಲಿ ಸಕ್ರಿಯರಾಗಿದ್ದರು ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಶರಣಾಗಿರುವ ನಕ್ಸಲರಿಗೆ ಸರ್ಕಾರದ ಯೋಜನೆಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಭರವಸೆ ನೀಡಿದ್ದಾರೆ. ನಕ್ಸಲ್‌ಸಂಘಟನೆಯ ಪೊಳ್ಳು ಭರವಸೆಗಳಿಂದ ಬೇಸತ್ತು ಅವರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ,

ಶರಣಾಗಿರುವ ನಕ್ಸಲರನ್ನು ನೋಡಲು ಸ್ಥಳೀಯರು ತಂಡ ತಂಡವಾಗಿ ಪೊಲೀಸ್‌ ಕ್ಯಾಂಪ್‌ ಇರುವ ಸ್ಥಳಕ್ಕೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.