ADVERTISEMENT

ವಿಶಾಖಪಟ್ಟಣ ಅನಿಲ ದುರಂತ| 8 ಸಾವು, ಸಾವಿರಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 7 ಮೇ 2020, 10:20 IST
Last Updated 7 ಮೇ 2020, 10:20 IST
ಅನಿಲ ದುರಂತ ಸಂಭವಿಸಿದ ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯ ದೃಶ್ಯ
ಅನಿಲ ದುರಂತ ಸಂಭವಿಸಿದ ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯ ದೃಶ್ಯ    

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೆಂಕಟಾಪುರದಲ್ಲಿರುವ ಎಲ್‌ಜಿ ಪಾಲಿಮರ್ಸ್‌ನಲ್ಲಿ ಅನಿಲ ಸೋರಿಕೆಯಾಗಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕಮಂದಿ ಅಸ್ವಸ್ಥಗೊಂಡಿದ್ದು ಎಲ್ಲರನ್ನು ಅಲ್ಲಿನ ಕಿಂಗ್‌ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಿಲ ಸೋರಿಕೆಯಿಂದಾಗಿ ಸುತ್ತಲ ಪ್ರದೇಶದ ಜನರಲ್ಲಿ ಉಸಿರಾಟ ತೊಂದರೆ, ಕಣ್ಣು ಉರಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಪೊಲೀಸರು, ಅಗ್ನಿಶಾಮಕ ದಳ, ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ADVERTISEMENT

ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಅವರು ವಿಶಾಖಪಟ್ಟಣದ ಕಿಂಗ್‌ ಜಾರ್ಜ್‌ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

‘ವಿಷನಿಲದ ಸೋರಿಕೆಯಾಗುತ್ತಿದ್ದಂತೆ ಅದು ಹರಡುವುದನ್ನು ತುರ್ತಾಗಿ ತಡೆಯಲಾಯಿತು. ಆದರೆ, ಅಲ್ಪ ಪ್ರಮಾಣದ ಅನಿಲ ಸುತ್ತಲ ಪ್ರದೇಶವನ್ನು ಆವರಿಸಿತು. ಹೀಗಾಗಿ ಜನರಿಗೆ ಸಮಸ್ಯೆ ಎದುರಾಗಿದೆ.ಈ ದುರಂತಕ್ಕೆ ಕಂಪನಿಯೇ ಹೊಣೆ. ಘಟನೆ ಬಗ್ಗೆ ಕಂಪನಿಯು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅಲ್ಲಿ ಲೋಪದೋಷಗಳು ಸಂಭವಿಸಿದ್ದರೆ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು,’ ಎಂದು ಸಚಿವ ಎಂಜಿ ರೆಡ್ಡಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳೂ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರಿಗೆ ಕಂಬನಿ ಮಿಡಿದಿದ್ದಾರೆ. ಘಟನೆಯಲ್ಲಿ ಅಸ್ವಸ್ಥಗೊಂಡಿರುವವರು ಗುಣಮುಖರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ನಡ್ಡಾ ಅವರೂ ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಜಗನ್‌ ಮೋಹನ ರೆಡ್ಡಿ ಅವರೊಂದಿಗೆ ಪ್ರಧಾನಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಅನಿಲ ಸೋರಿಕೆ ಸಂಭವಿಸಿದ ಪ್ರದೇಶದಲ್ಲಿ ಎನ್‌ಡಿಆರ್‌ಎಫ್‌ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. 27 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ ಎಂದು ಎನ್‌ಡಿಆರ್‌ಎಫ್‌ನ ಡಿಜಿ ಎಸ್‌. ಎನ್‌. ಪ್ರಧಾನ್‌ ತಿಳಿಸಿದ್ದಾರೆ.

ಸ್ಥಳೀಯರಲ್ಲಿ ಗಂಟಲು, ಚರ್ಮ ಉರಿ ಕಾಣಿಸಿಕೊಂಡಿದೆ. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ. ಪೊಲೀಸರು, ಜಿಲ್ಲಾಡಳಿತ ನೆರವಿಗೆ ಧಾವಿಸಿದೆ. ಈವರೆಗೆ 1000–1500 ಮಂದಿಯನ್ನು ಸ್ಥಳಾಂತರ ಮಾಡಲಿದೆ. 800 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.