ADVERTISEMENT

ಕಾಶ್ಮೀರದಲ್ಲಿ ಉಗ್ರರಿಂದ ಐವರು ಹೊರರಾಜ್ಯಗಳ ಕಾರ್ಮಿಕರ ಹತ್ಯೆ

ಏಜೆನ್ಸೀಸ್
Published 30 ಅಕ್ಟೋಬರ್ 2019, 3:42 IST
Last Updated 30 ಅಕ್ಟೋಬರ್ 2019, 3:42 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ ಉಗ್ರಗಾಮಿಗಳು ಐವರು ಹೊರರಾಜ್ಯಗಳ ಕೂಲಿ ಕಾರ್ಮಿಕರನ್ನು ಹತ್ಯೆಗೈದಿದ್ದಾರೆ.

ಮೃತರಾದ ಐವರ ಪೈಕಿ ಮೂವರನ್ನು ಶೇಖ್ ಕಮರುದ್ದೀನ್, ಶೇಖ್ ಮೊಹಮದ್ ರಫೀಕ್ ಮತ್ತು ಶೇಖ್ ಮುರ್ನ್ಸ ಸುಲಿನ್ ಎಂದು ಗುರುತಿಸಲಾಗಿದೆ. ಗಾಯಾಳು ಝಹೂರುದ್ದೀನ್ ಅವರನ್ನು ಅನಂತನಾಗ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಧಾವಿಸಿದಪೊಲೀಸರು, ದಾಳಿ‌ ನಡೆದ ಸ್ಥಳದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿವೆ ಎಂದುಹೇಳಿದ್ದಾರೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಸಾಗರ್ದಿಘಿ ಗ್ರಾಮದ ಕೂಲಿ ಕಾರ್ಮಿಕರು ಸ್ಥಳೀಯರೊಬ್ಬರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಇದಕ್ಕೂ ಮೊದಲು ಉಗ್ರರು ಅನಂತನಾಗ್ ಜಿಲ್ಲೆಯಲ್ಲಿ ಟ್ರಕ್ ಚಾಲಕನ‌ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಂತರ ಸಪೋರ್ ಜಿಲ್ಲೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಾರ್ವಜನಿಕರತ್ತ ಗುಂಡು ಹಾರಿಸಿದ್ದರು.

ಪುಲ್ವಾಮಾದಲ್ಲಿ ಶಾಲೆಯೊಂದಕ್ಕೆ ಭದ್ರತೆ ಒದಗಿಸಿದ್ದ ಅರೆಸೇನಾ ಪಡೆಗಳ ಮೇಲೆಯೂ ಉಗ್ರರು ಮನಸೋಯಿಚ್ಛೆ ಗುಂಡು ಹಾರಿಸಿದ್ದರು.

ಕಾಶ್ಮೀರದಲ್ಲಿ ಸೇಬು ಕೊಯ್ಲಾಗುವ ಈ ಕಾಲದಲ್ಲಿ ಹೊರರಾಜ್ಯಗಳ ಕಾರ್ಮಿಕರು ಅಲ್ಲಿಗೆ ಹೋಗುವುದು ಪ್ರತಿವರ್ಷದ ವಾಡಿಕೆ. ಇದೇ ಮೊದಲ ಬಾರಿಗೆ ಉಗ್ರರು ಕೂಲಿ ಕಾರ್ಮಿಕರನ್ನು ಗುರಿಯಾಗಿಸಿ ದಾಳಿ ಸಂಘಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.