ADVERTISEMENT

ಪಂಚರಾಜ್ಯ ಚುನಾವಣೆ: ರಾಜಕೀಯ ಲೆಕ್ಕಾಚಾರ ನಿರ್ಧರಿಸಲಿದೆ ಫಲಿತಾಂಶ

ಬಿಜೆಪಿ ವರ್ಚಸ್ಸು, ಕಾಂಗ್ರೆಸ್‌ನ ನಾಯಕತ್ವ, ಎಎಪಿ ನೆಲೆ ವಿಸ್ತರಣೆ ವಿಚಾರಗಳಿಗೆ ಸಿಗಲಿದೆ ಸ್ಪಷ್ಟತೆ

ಶೆಮಿಜ್‌ ಜಾಯ್‌
Published 9 ಮಾರ್ಚ್ 2022, 20:22 IST
Last Updated 9 ಮಾರ್ಚ್ 2022, 20:22 IST
ವಾರಾಣಸಿಯ ಪಹಾಡಿಯಾ ಮತಎಣಿಕೆ ಕೇಂದ್ರದ ಎದುರು ಬಿಗಿಭದ್ರತೆ ಕಲ್ಪಿಸಲಾಗಿದೆ –ಪಿಟಿಐ ಚಿತ್ರ
ವಾರಾಣಸಿಯ ಪಹಾಡಿಯಾ ಮತಎಣಿಕೆ ಕೇಂದ್ರದ ಎದುರು ಬಿಗಿಭದ್ರತೆ ಕಲ್ಪಿಸಲಾಗಿದೆ –ಪಿಟಿಐ ಚಿತ್ರ   

ನವದೆಹಲಿ: ಗುರುವಾರ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಹಣೆಬರಹವನ್ನು ಮಾತ್ರ ಬರೆಯುವುದಿಲ್ಲ. ಇದು 2024ರ ಸಾರ್ವತ್ರಿಕ ಚುನಾವಣೆಗೆ ತೆಗೆದುಕೊಳ್ಳಬೇಕಾದ ರಾಜಕೀಯ ತೀರ್ಮಾನಗಳನ್ನೂನಿರ್ಧರಿಸುತ್ತದೆ. ಹೀಗಾಗಿ ಐದು ರಾಜ್ಯಗಳ ಫಲಿತಾಂಶವನ್ನು ಎಲ್ಲ ಪಕ್ಷಗಳು ಉಸಿರುಬಿಗಿಹಿಡಿದು ಕಾಯುತ್ತಿವೆ.

ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಗುರುವಾರ ಬೆಳಿಗ್ಗೆ 8ರಿಂದ ಆರಂಭವಾಗಲಿದೆ. ಮತ ಎಣಿಕೆ ಆರಂಭವಾದ ಒಂದೆರಡು ಗಂಟೆಗಳಲ್ಲಿ ಚಿತ್ರಣ ಲಭ್ಯವಾಗುವ ನಿರೀಕ್ಷೆಯಿದೆ. ಮತ ಎಣಿಕೆಗೆ ಚುನಾವಣಾ ಆಯೋಗವು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ಗೆಲ್ಲಲಿವೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದರೂ, ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳಾದ ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಅಕಾಲಿದಳಗಳಿಗೆ ಈ ಫಲಿತಾಂಶ ನಿರ್ಣಾಯಕವಾಗಿದೆ. ಇದೇ ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಾಗೂ ಬಿಜೆಪಿಯೇತರ ಪಕ್ಷಗಳು ಒಂದೇ ವೇದಿಕೆಯಡಿ ಬರುವ ಪ್ರಕ್ರಿಯೆಯನ್ನು ಈ ಫಲಿತಾಂಶ ಪ್ರಭಾವಿಸಲಿದೆಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಪಂಜಾಬ್ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ಈ ಬಾರಿ ಒಂದು ರಾಜ್ಯವನ್ನು ಕಳೆದುಕೊಂಡರೂ ಅದು ಪಕ್ಷಕ್ಕೆ ದೊಡ್ಡ ನಷ್ಟ. ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದ ಫಲಿತಾಂಶದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿವೆ. ‘ದೆಹಲಿಗೆ ಹೋಗುವ ರಸ್ತೆಯು ಲಖನೌ ಮೂಲಕವೇ ಹಾದುಹೋಗಬೇಕು’ ಎಂಬ ರಾಜಕೀಯ ವಿಶ್ಲೇಷಕರ ಮಾತು, ಉತ್ತರಪ್ರದೇಶದ ಫಲಿತಾಂಶದ ಮಹತ್ವವನ್ನು ವಿವರಿಸುತ್ತದೆ.

ಉತ್ತರ ಪ್ರದೇಶದಲ್ಲಿ ಸ್ಪಷ್ಟ ಗೆಲುವು ದಾಖಲಿಸುವುದು ಹಾಗೂ ಗೋವಾ, ಉತ್ತರಾಖಂಡ, ಮಣಿಪುರದಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿಗೆ ಕಠಿಣ ಹಾದಿ ಎಂದು ವಿಶ್ಲೇಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಒಂದು ವೇಳೆ ಕಡಿಮೆ ಅಂತರದಲ್ಲಿ ಬಿಜೆಪಿಯು ಗೆದ್ದರೆ, ಯೋಗಿ ಆದಿತ್ಯನಾಥ ಅವರು ಹೊಸ ಮುಖ್ಯಮಂತ್ರಿ ಆಯ್ಕೆಗೆ ದಾರಿ ಮಾಡಿಕೊಡಲಿದ್ದಾರೆಯೇ ಎಂಬುದನ್ನೂ ಈ ಫಲಿತಾಂಶ ನಿರ್ಧರಿಸಲಿದೆ.

ಈ ಬಾರಿ ಸಮಾಜವಾದಿ ಪಕ್ಷವು ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದ್ದರೂ, ಆಡಳಿತಾರೂಢ ಬಿಜೆಪಿಯನ್ನು ಅದು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ಕೊನೆಯ ಹಂತದ ಮತಎಣಿಕೆ ನಿರ್ಧರಿಸಲಿದೆ. ರಾಜ್ಯದಲ್ಲಿ ಹಿಂದೊಮ್ಮೆ ಅಧಿಕಾರ ಹಿಡಿದಿದ್ದ ಎಸ್‌ಪಿ, ಮತ್ತೆ ಗದ್ದುಗೆಗೆ ಏರಲು ಕಾಯುತ್ತಿದೆ.

ಮತದಾನೋತ್ತರ ಸಮೀಕ್ಷೆಗಳಲ್ಲಿ ಸ್ಥಾನ ಪಡೆಯದ ಕಾಂಗ್ರೆಸ್, ಉತ್ತರಾಖಂಡ, ಗೋವಾ, ಪಂಜಾಬ್ ಹಾಗೂ ಮಣಿಪುರದಲ್ಲಿ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ. ಒಂದೆರಡನ್ನು ಹೊರತುಪಡಿಸಿದರೆ, ಬೇರಾವ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಯಾವ ರಾಜ್ಯದಲ್ಲೂ ಬಹಮತದ ಸನಿಹಕ್ಕೆ ಬರಲಿದೆ ಎಂದು ಹೇಳಿಲ್ಲ.

ಏನಾಗಲಿದೆ ಕಾಂಗ್ರೆಸ್ ಸ್ಥಿತಿ?
ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ದುರ್ಬಲ ಪ್ರದರ್ಶನ ನೀಡಿದಲ್ಲಿ, ಪ್ರತಿಪಕ್ಷಗಳು ಒಗ್ಗಟ್ಟಾಗುವ ಪ್ರಕ್ರಿಯೆಯಲ್ಲಿ ಪಕ್ಷ ಮತ್ತೆ ಏಕಾಂಗಿಯಾಗಲಿದೆ. ಇದು ಕಾಂಗ್ರೆಸ್ ನಾಯಕತ್ವದ ಮೇಲೂ ಪ್ರಭಾವ ಬೀರಲಿದ್ದು, ಸೋನಿಯಾ ಗಾಂಧಿ ಕುಟುಂಬವು ಬಿಕ್ಕಟ್ಟು ಎದುರಿಸಲು ಕಾರಣವಾಬಹುದು. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ ಜಿ–23 ಅಭಿಯಾನಕ್ಕೆ ಬಲ ಸಿಕ್ಕಂತಾಗುತ್ತದೆ.

ಗೋವಾದಲ್ಲಿ ಕಾಂಗ್ರೆಸ್ ಗೆದ್ದರೆ, ಅದು ಬಿಜೆಪಿ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಅದು ತೃಣಮೂಲ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ನೆಲೆಯೂರುವ ಆಕಾಂಕ್ಷೆಯನ್ನೂ ಪ್ರಭಾವಿಸುತ್ತದೆ. ಹಾಗೆಯೇ ಪಂಜಾಬ್‌ನಲ್ಲಿ ಎಎಪಿ ದಾಖಲಿಸುವ ಗೆಲುವು, ಕಾಂಗ್ರೆಸ್ ಹಾಗೂ ಅಕಾಲಿದಳಗಳಿಗೆ ತೊಡಕಾಗಲಿದೆ.

ಮತಗಟ್ಟೆ ಸಮೀಕ್ಷೆಯಂತೆ ಪಂಜಾಬ್‌ನಲ್ಲಿ ಎಎಪಿ ಗೆಲ್ಲಲಿದೆ ಎಂಬುದು ನಿಜವಾಗುವುದಿಲ್ಲ ಎಂಬುದು ಕಾಂಗ್ರೆಸ್ ನಂಬಿಕೆ. ಸಮೀಕ್ಷೆಗಳು ಭವಿಷ್ಯ ನುಡಿದಂತೆ ಪಕ್ಷದ ಸಂಖ್ಯಾಬಲವು 30–40 ಸ್ಥಾನಗಳಿಗೆ ಕುಸಿದರೆ, ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಶಾಸಕರನ್ನು ಸೆಳೆಯಲಿದ್ದಾರೆಯೇ ಎಂಬ ಕುತೂಹಲ ಇದೆ. ಉತ್ತರಾಖಂಡ, ಗೋವಾದ ಮೇಲೆ ಕಾಂಗ್ರೆಸ್ ಹೆಚ್ಚು ಗಮನ ಕೇಂದ್ರೀಕರಿಸಿದೆ. ಹಿರಿಯ ಮುಖಂಡರಾದ ಭೂಪೇಶ್ ಬಘೆಲ್, ಪಿ.ಚಿದಂಬರಂ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ವಿಶೇಷ ವೀಕ್ಷಕರಾಗಿ ಪಕ್ಷ ನಿಯೋಜಿಸಿದ್ದು, ಕಾರ್ಯತಂತ್ರ ರೂಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.