ADVERTISEMENT

ಕಾಶ್ಮೀರ: ಭಯೋತ್ಪಾದನೆ ಸಂಬಂಧಿತ ಸಾವು ಶೇ 50ರಷ್ಟು ಇಳಿಕೆ

2019ರ ನಂತರ ತಗ್ಗಿದ ಎನ್‌ಕೌಂಟರ್‌ಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 0:30 IST
Last Updated 16 ಡಿಸೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶ್ರೀನಗರ: ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಸಾಲಿನಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ನಾಗರಿಕರು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿಯ ಸಾವಿನ ಪ್ರಮಾಣದಲ್ಲಿ ಶೇ 50ರಷ್ಟು ಇಳಿಕೆ ಕಂಡುಬಂದಿದೆ ಎಂದು ಅಧಿಕೃತ ದತ್ತಾಂಶಗಳು ಹೇಳುತ್ತವೆ.

ಕಳೆದ ವರ್ಷ 31 ನಾಗರಿಕರು ಹಾಗೂ 32 ಯೋಧರು ಸೇರಿದಂತೆ 63 ಮಂದಿ ಮೃತಪಟ್ಟಿದ್ದರು. ಈ ವರ್ಷ, ನವೆಂಬರ್‌ ವರೆಗಿನ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ 33. ಇದರಲ್ಲಿ ನಾಗರಿಕರ ಸಂಖ್ಯೆ 13 ಹಾಗೂ ಯೋಧರ ಸಂಖ್ಯೆ 20 ಎಂದು ಅಂಕಿ–ಅಂಶಗಳನ್ನು ಉಲ್ಲೇಖಿಸಿ ಮೂಲಗಳು ಹೇಳಿವೆ.

ADVERTISEMENT

ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರದ ದಿನಗಳಲ್ಲಿ ಭಯೋತ್ಪಾದಕ ಕೃತ್ಯಗಳಿಂದಾಗಿ ಸಂಭವಿಸುವ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿರುವುದನ್ನು ಈ ದತ್ತಾಂಶಗಳು ಹೇಳುತ್ತವೆ ಎಂದು ಮೂಲಗಳು ತಿಳಿಸಿವೆ.

‘2017ರಿಂದ 2019ರ ವರೆಗಿನ ಅವಧಿಯಲ್ಲಿ, ಎನ್‌ಕೌಂಟರ್‌ ನಡೆಯುತ್ತಿದ್ದ ಸ್ಥಳಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರ ಸಾವುಗಳು ಸಂಭವಿಸುತ್ತಿದ್ದವು. ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಈ ಪ್ರಮಾಣ ಹೆಚ್ಚಿತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಉಗ್ರರು ಹಾಗೂ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದ ಬಹುತೇಕ ಸಂದರ್ಭಗಳಲ್ಲಿ, ಜನರು ಘಟನಾ ಸ್ಥಳಗಳತ್ತ ಓಡಿ ಬರುತ್ತಿದ್ದರು. ಸಿಲುಕಿ ಹಾಕಿಕೊಂಡಿರುತ್ತಿದ್ದ ಉಗ್ರರು ಪಾರಾಗಲು  ನೆರವಾಗುವ ಉದ್ದೇಶದಿಂದ ಜನರು ಹೀಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ, ಭದ್ರತಾಪಡೆಗಳು ನಡೆಸುತ್ತಿದ್ದ ಪ್ರತಿದಾಳಿಯಲ್ಲಿ ನಾಗರಿಕರೂ ಸಾವನ್ನಪ್ಪುತ್ತಿದ್ದರು’ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ.

ಆದರೆ, 2019ರ ನಂತರ ಇಂತಹ ಘಟನೆಗಳು ನಡೆಯುತ್ತಿಲ್ಲ. ಹೀಗಾಗಿ ಕಣಿವೆಯಲ್ಲಿನ ಒಟ್ಟಾರೆ ಭದ್ರತಾ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದೂ ಹೇಳಿದ್ದಾರೆ.

83: 2021ರಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ನಾಗರಿಕರು ಹಾಗೂ ಯೋಧರ ಸಂಖ್ಯೆ

124: 2019ರಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ನಾಗರಿಕರು ಹಾಗೂ ಯೋಧರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.