ADVERTISEMENT

ಮಹಿಳೆಯರಿಗೆ ಶೇ 50ರಷ್ಟು ಟಿಕೆಟ್‌: ಎನ್‌ಟಿಕೆ ಮಾದರಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 19:13 IST
Last Updated 21 ಮಾರ್ಚ್ 2021, 19:13 IST
ಎನ್‌ಟಿಕೆ ಮುಖ್ಯಸ್ಥ ಸೀಮನ್
ಎನ್‌ಟಿಕೆ ಮುಖ್ಯಸ್ಥ ಸೀಮನ್   

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ, ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದು – ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಪಕ್ಷವು ಚುನಾವಣೆಯಲ್ಲಿ ಈ ರೀತಿಯ ಭಿನ್ನ ಭರವಸೆಗಳನ್ನು ನೀಡಿ ಸುದ್ದಿಯಾಗಿದೆ.

234 ಕ್ಷೇತ್ರಗಳಿಗೆ ಏಪ್ರಿಲ್ 6ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಟಿಕೆ ಪಕ್ಷವು 117 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 16 ಸಾಮಾನ್ಯ ಮತಕ್ಷೇತ್ರಗಳಲ್ಲಿ ಸ್ಪರ್ಧಿಸಲು ದಲಿತರಿಗೆ ಟಿಕೆಟ್ ನೀಡಿದೆ. ಆದರೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ದಲಿತರಿಗೆ ಮೀಸಲಾದ ಕ್ಷೇತ್ರಗಳಲ್ಲಿ ಮಾತ್ರ ಆ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಶ್ರೀಲಂಕಾದಲ್ಲಿ ನಾಗರಿಕ ಯುದ್ಧ ಮುಕ್ತಾಯವಾದ ಬಳಿಕ ಹುಟ್ಟಿಕೊಂಡಿದ್ದೇ ಈ ರಾಜಕೀಯ ಸಂಘಟನೆ. ನಟ, ನಿರ್ದೇಶಕ ಸೀಮನ್ ಅವರನೇತೃತ್ವದಲ್ಲಿ ಆರಂಭವಾದ ಪಕ್ಷವು, ವೇಲುಪಿಳ್ಳೈ ಪ್ರಭಾಕರನ್ ಅವರ ಸಿದ್ಧಾಂತಗಳನ್ನು ಬಹಿರಂಗವಾಗಿ ಆರಾಧಿಸುವ ಮೂಲಕ ಸುದ್ದಿಯಾಗಿತ್ತು. ರಾಜಕೀಯ ಅಧಿಕಾರವನ್ನು ಸ್ಥಳೀಯ ತಮಿಳರಿಗೆ ಮಾತ್ರ ವಹಿಸಬೇಕೇ ಹೊರತು ಹೊರಗಿನವರು ಅಲ್ಲ ಎಂಬುದು ಈ ಪಕ್ಷದ ಸಿದ್ಧಾಂತ.

ADVERTISEMENT

ದ್ರಾವಿಡ ಸಿದ್ಧಾಂತವನ್ನು ಉರುಳಿಸಿ, ಅದನ್ನು ‘ತಮಿಳು ರಾಷ್ಟ್ರೀಯತಾವಾದಿ ರಾಜಕಾರಣ’ದೊಂದಿಗೆ ಬದಲಾಯಿಸುವ ಬಗ್ಗೆ ಸೀಮನ್ ಮಾತನಾಡುತ್ತಾರೆ. ‘ದ್ರಾವಿಡ ಪಕ್ಷಗಳು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಿವೆಯೇ? ಎಐಎಡಿಎಂಕೆ ಅಥವಾ ಡಿಎಂಕೆ ಪಕ್ಷಗಳು ಎಷ್ಟು ಮಹಿಳೆಯರಿಗೆ, ಎಷ್ಟು ದಲಿತರಿಗೆ ಹಾಗೂ ರಾಜ್ಯದ ಮೂಲ ಸಮುದಾಯಗಳಿಗೆ ಟಿಕೆಟ್ ನೀಡಿವೆ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಜನರಲ್ಲಿ ನಮ್ಮ ಪಕ್ಷದ ಬಗ್ಗೆ ಸಕಾರಾತ್ಮಕ ಮನೋಭಾವ ಬೆಳೆಯುತ್ತಿದೆ. ಈ ಚುನಾವಣೆಯಲ್ಲಿ ಎನ್‌ಟಿಕೆ ಹೆಚ್ಚಿನ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ’ ಎಂದು ಸೀಮನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.