ADVERTISEMENT

ಮೋದಿಗೆ ಉಡುಗೊರೆಯಾಗಿ ನೀರು ಶುದ್ಧೀಕರಣ ಜೀಪು

ಇಸ್ರೇಲ್ ಪ್ರಧಾನಿ ಭಾರತ ಭೇಟಿ ವೇಳೆ ಹಸ್ತಾಂತರ

ಪಿಟಿಐ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ಕಳೆದ ಜುಲೈನಲ್ಲಿ ಇಸ್ರೇಲ್ ಭೇಟಿ ವೇಳೆ ಪ್ರಧಾನಿ ಮೋದಿ ಅವರು ನೇತನ್ಯಾಹು ಅವರ ಜೊತೆ ಉಪ್ಪುನೀರು ಶುದ್ಧೀಕರಣ ವಾಹನದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದರು.
ಕಳೆದ ಜುಲೈನಲ್ಲಿ ಇಸ್ರೇಲ್ ಭೇಟಿ ವೇಳೆ ಪ್ರಧಾನಿ ಮೋದಿ ಅವರು ನೇತನ್ಯಾಹು ಅವರ ಜೊತೆ ಉಪ್ಪುನೀರು ಶುದ್ಧೀಕರಣ ವಾಹನದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದರು.   

ಜೆರುಸಲೇಂ, ಇಸ್ರೇಲ್: ನೀರಿನಲ್ಲಿರುವ ಉಪ್ಪಿನಂಶ ಬೇರ್ಪಡಿಸಿ ಶುದ್ಧೀಕರಿಸುವ ವಾಹನವೊಂದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಿದ್ದಾರೆ. ಜನವರಿ 14ರಂದು ಭಾರತ ಪ್ರವಾಸದ ವೇಳೆ ನೇತನ್ಯಾಹು ಅವರು ಮೋದಿ ಅವರಿಗೆ ಇದನ್ನು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜುಲೈನಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದ ಮೋದಿ ಅವರು ಅಲ್ಲಿನ ಓಲ್ಗಾ ಕಡಲತೀರದಲ್ಲಿ ಇದೇ ಜೀಪ್ ನಲ್ಲಿ ಸಂಚರಿಸಿದ್ದರು. ಇದನ್ನೇ ಅವರಿಗೆ ವಿಶೇಷ ಉಡುಗೊರೆಯಾಗಿ ನೀಡಲಾಗುತ್ತಿದೆ. ಇದು ಭಾರತದತ್ತ ಈಗಾಗಲೇ ಪ್ರಯಾಣ ಬೆಳೆಸಿದೆ.

ಈ ಜೀಪ್‌ನ ಬೆಲೆ ಸುಮಾರು ₹70 ಲಕ್ಷ (3,90,000 ಶೆಕೆಲ್ಸ್). ಇಸ್ರೇಲ್‌ನ ಓಲ್ಗಾ ಕಡಲತೀರದಲ್ಲಿ ಸ್ಥಾಪಿಸಿರುವ ನೀರಿನಿಂದ ಲವಣಾಂಶ ಪ್ರತ್ಯೇಕಿಸುವ ಘಟಕಕ್ಕೆ ಮೋದಿ ಈ ಹಿಂದೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

ADVERTISEMENT

ಗಾಲ್–ಮೊಬೈಲ್ ನೀರು ಶುದ್ಧೀಕರಣ ವಾಹನವನ್ನು ಉತ್ತಮ ಗುಣಮಟ್ಟದ ಶುದ್ಧ ನೀರು ಉತ್ಪಾದನೆ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ನೈಸರ್ಗಿಕ ವಿಕೋಪಗಳಾದ ಭೂಕಂಪ ಮತ್ತು ಪ್ರವಾಹದ ವೇಳೆ ಹಾಗೂ  ಕುಗ್ರಾಮಗಳಲ್ಲಿ ಕುಡಿಯುವ ನೀರಿನ ಅಗತ್ಯವನ್ನು ಇದು ಪೂರೈಸುತ್ತದೆ.

ಇದು ದಿನವೊಂದಕ್ಕೆ 20 ಸಾವಿರ ಲೀಟರ್ ಉಪ್ಪು ನೀರು ಮತ್ತು 80 ಸಾವಿರ ಲೀಟರ್ ಕಲುಷಿತ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.