ADVERTISEMENT

ಲೋಯ ಸಾವಿನ ತನಿಖೆ: ನಾಳೆ ಅರ್ಜಿ ವಿಚಾರಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‌) ಜನವರಿ 15ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವುದಿಲ್ಲ.

ಶುಕ್ರವಾರ ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಇಬ್ಬರು ನ್ಯಾಯಮೂರ್ತಿಗಳ (ಕೋರ್ಟ್‌ ಹಾಲ್‌ ನಂ 10) ಪೈಕಿ ನ್ಯಾಯಮೂರ್ತಿ ಮೋಹನ್‌ ಎಂ.ಶಾಂತನಗೌಡರ ಅವರು ಸೋಮವಾರ ರಜೆಯಲ್ಲಿರಲಿದ್ದಾರೆ.

ಸುಪ್ರೀಂ ಕೋರ್ಟ್‌ನ ಕಲಾಪ ಪಟ್ಟಿಯ ಪ್ರಕಾರ, ಕೋರ್ಟ್‌ ಹಾಲ್‌ ನಂ 10ರಲ್ಲಿ 15ರಂದು ಕಲಾಪ ನಡೆಯುವುದಿಲ್ಲ. ಹಾಗಾಗಿ, ಅರ್ಜಿಗಳ ವಿಚಾರಣೆ 16ರಂದು (ಮಂಗಳವಾರ) ವಿಚಾರಣೆಗೆ ಬರುವ ಸಾಧ್ಯತೆ ಇದೆ.

ADVERTISEMENT

ದವೆ ವಿರುದ್ಧ ಆರೋಪ: ಈ ಮಧ್ಯೆ, ಅರ್ಜಿದಾರರಿಗೆ ಅನುಕೂಲ ಆಗುವ ರೀತಿಯಲ್ಲಿ ನ್ಯಾಯಪೀಠ ಪ್ರಕರಣವನ್ನು ನಿರ್ವಹಿಸದು ಎಂಬ ಕಾರಣ ನೀಡಿ ಪಿಐಎಲ್‌ ಅನ್ನು ವಾಪಸ್‌ ಪಡೆಯುವಂತೆ ಹಿರಿಯ ವಕೀಲ ದುಷ್ಯಂತ್‌ ದವೆ ಅವರು ತಮಗೆ ಹೇಳಿದ್ದಾರೆ ಎಂದು ಅರ್ಜಿದಾರರಲ್ಲಿ ಒಬ್ಬರಾಗಿರುವ ತೆಹ್ಸೀನ್‌ ಪೂನಾವಾಲ ಆರೋಪಿಸಿದ್ದಾರೆ.

ಈ ಮೊದಲು ಪ್ರಕರಣದಲ್ಲಿ ತಾವೇ ವಾದಿಸುವುದಾಗಿ ದವೆ ಹೇಳಿದ್ದರು. ಆದರೆ, ನಂತರ ವಾಪಸ್‌ ಪಡೆಯುವಂತೆ ಮನವೊಲಿಸಲು ಯತ್ನಿಸಿದ್ದರು ಎಂದು ಅವರು ಹೇಳಿದ್ದಾರೆ.

ಮತ್ತೊಂದು ಪಿಐಎಲ್‌ ಅನ್ನು ಮಹಾರಾಷ್ಟ್ರದ ಪತ್ರಕರ್ತ ಬಂಡೂರಾಜ್‌ ಸಂಭಾಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.