ADVERTISEMENT

ಬಾಳೆಹಣ್ಣಿನ ಡಿಎನ್‌ಎ ಬೇರ್ಪಡಿಸಿ ಗಿನ್ನೆಸ್‌ ದಾಖಲೆ ಮಾಡಿದ ಲಖನೌ ವಿದ್ಯಾರ್ಥಿಗಳು

ಎಸ್.ರವಿಪ್ರಕಾಶ್
Published 6 ಅಕ್ಟೋಬರ್ 2018, 9:40 IST
Last Updated 6 ಅಕ್ಟೋಬರ್ 2018, 9:40 IST
ಡಿಎನ್‌ಎ ಪ್ರತ್ಯೇಕಿಸುತ್ತಿರುವ ವಿದ್ಯಾರ್ಥಿಗಳು
ಡಿಎನ್‌ಎ ಪ್ರತ್ಯೇಕಿಸುತ್ತಿರುವ ವಿದ್ಯಾರ್ಥಿಗಳು   

ಲಖನೌ: ಮುಂಜಾನೆ ಈ ವಿದ್ಯಾರ್ಥಿಗಳಿಗೆ ಪಾಠ ಇರಲಿಲ್ಲ. ಬದಲಿಗೆ ಒಂದು ತುಂಡು ಬಾಳೇ ಹಣ್ಣು ಮತ್ತು ಸ್ವಲ್ಪ ರಾಸಾಯನಿಕ ದ್ರಾವಣವನ್ನು ನೀಡಲಾಗಿತ್ತು.

ನೀಡಲಾದ ಬಾಳೆ ಹಣ್ಣು ತಿನ್ನಲು ಅಲ್ಲ! ಕೊಟ್ಟಿರುವಷ್ಟೇ ಬಾಳೆ ಹಣ್ಣಿನಿಂದ ಅದರ ಡಿಎನ್‌ಎ ಪ್ರತ್ಯೇಕಗೊಳಿಸುವ ಸ್ಪರ್ಧೆ. ಜೊತೆಗೆ ಗಿನ್ನೆಸ್‌ ದಾಖಲೆ ನಿರ್ಮಾಣವೂ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಲಖನೌನ ಜಿ.ಡಿ.ಗೋಯೆಂಕಾ ಶಾಲೆಯ 550 ವಿದ್ಯಾರ್ಥಿಗಳು ಒಂದೇ ಬಾರಿ ಬಾಳೆಹಣ್ಣಿನ ಡಿಎನ್‌ಎ ಬೇರ್ಪಡಿಸಬೇಕಿತ್ತು.ಎಂಟರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ಅಮೆರಿಕಾದ ಸಿಯಾಟಲ್‌ನಲ್ಲಿ 300 ವಿದ್ಯಾರ್ಥಿಗಳು ಡಿಎನ್ಎ ಪ್ರತ್ಯೇಕಿಸಿರುವುದು ಈವರೆಗಿನ ದಾಖಲೆಯಾಗಿದೆ.

ADVERTISEMENT

ಡಿಎನ್‌ಎ ಹೇಗೆ ಬೇರ್ಪಡಿಸಿದರು?

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಡಿಎನ್ಎ ಪ್ರತ್ಯೇಕಿಸಲು ಒಂದು ಕಿಟ್ ನೀಡಲಾಗಿತ್ತು. ಆ ಕಿಟ್‌ನಲ್ಲಿ ಗಾಜಿನ ಬೀಕರ್, ಪುಟ್ಟ ಗಾತ್ರದ ಕಪ್, ನೂಡಲ್ಸ್ ತಿನ್ನಲು ಬಳಸುವ ಮಾದರಿಯ ಕಡ್ಡಿಯೂ ಇತ್ತು.

ಮೊದಲಿಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಬಾಳೆಹಣ್ಣು ಕಿವಿಚಿ, ಮಿಲ್ಕ್ ಶೇಕ್ ಮಾಡಲಾಗುತ್ತದೆ. ಬಳಿಕ ಅದನ್ನು ಕಪ್‌ಗೆ ಮಸ್ಲಿನ್ ಬಟ್ಟೆಯ ಮೂಲಕ ಸೋಸಿ ರಸವನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಇದಕ್ಕೆ ಎಥನಾಲ್ ಸೇರಿಸಿದಾಗ ಹಣ್ಣಿನ ಡಿಎನ್ಎ ಪ್ರತ್ಯೇಕಗೊಳ್ಳುತ್ತದೆ.ಎಥನಾಲ್ ಜತೆಗೆ ಸೋಡಿಯಂ ಕ್ಲೋರೈಡ್ ಕೂಡ ಸೇರಿಸಲಾಗುತ್ತದೆ.

ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 1 ಗಂಟೆ 30 ನಿಮಿಷ ಬೇಕಾಯಿತು.ಇದಕ್ಕೆ ಸಮಯದ ನಿಗದಿ ಇರಲಿಲ್ಲ. ವಿದ್ಯಾರ್ಥಿಗಳು ನಡೆಸಿದ ಡಿಎನ್‌ಎ ಪ್ರತ್ಯೇಕಿಸುವ ಪ್ರಕ್ರಿಯೆಯನ್ನು ತಜ್ಞರು ಪರಿಶೀಲಿಸಿದರು.ಅಂತಿಮವಾಗಿ ಎಲ್ಲ 550ವಿದ್ಯಾರ್ಥಿಗಳು ನೂತನ ವಿಶ್ವ ದಾಖಲೆಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.