ADVERTISEMENT

ಆಧಾರ್‌ ಕಾಯ್ದೆ ರದ್ದು ಕಷ್ಟ

ಸಂವಿಧಾನ ಪೀಠ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
ಆಧಾರ್‌ ಕಾಯ್ದೆ ರದ್ದು ಕಷ್ಟ
ಆಧಾರ್‌ ಕಾಯ್ದೆ ರದ್ದು ಕಷ್ಟ   

ನವದೆಹಲಿ: ಆಧಾರ್‌ ಸಂಖ್ಯೆ ದುರುಪಯೋಗವಾಗುವ ಸಾಧ್ಯತೆ ಇದೆ ಎಂಬ ಒಂದೇ ಕಾರಣಕ್ಕೆ ಆಧಾರ್‌ ಕಾಯ್ದೆಯ ನಿಬಂಧನೆಗಳನ್ನು ರದ್ದುಪಡಿಸುವುದು ಕಷ್ಟದ ಕೆಲಸ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟವಾಗಿ ಹೇಳಿದೆ.

ತಂತ್ರಜ್ಞಾನದ ದುರ್ಬಳಕೆಯಾಗುತ್ತದೆ ಎಂಬ ಕಾರಣಕ್ಕೆ ಹೊಸ ತಂತ್ರಜ್ಞಾನದ ಸಂಶೋಧನೆಯೇ ಬೇಡ ಎಂದು ಹೇಳಲು ಆಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಅಭಿಪ್ರಾಯಪಟ್ಟಿದೆ.

ತಾಂತ್ರಿಕವಾಗಿ ಯಾವುದು ಸುರಕ್ಷಿತ ಮತ್ತು ಯಾವುದು ಸುರಕ್ಷಿತವಲ್ಲ ಎಂದು ನಿಖರವಾಗಿ ಹೇಳುವುದು ನ್ಯಾಯಾಲಯಕ್ಕೆ ಕಷ್ಟವಾಗುತ್ತದೆ ಎಂದು ಪೀಠ ಅಸಹಾಯಕತೆ ವ್ಯಕ್ತಪಡಿಸಿದೆ.

ADVERTISEMENT

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌, ಎ.ಎ. ಸಿಕ್ರಿ, ಎ.ಎಂ. ಖಾನ್ವಿಲ್ಕರ್‌ ಮತ್ತು ಅಶೋಕ್‌ ಭೂಷಣ್‌ ಈ ಪೀಠದಲ್ಲಿದ್ದಾರೆ.

ಖಾಸಗಿತನದ ಹಕ್ಕಿಗೆ ಸಂಬಂಧಿಸಿದಂತೆ ಕಳೆದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಡೇಟಾ ಸುರಕ್ಷತೆಯ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಪೀಠ ಹೇಳಿದೆ.

ಆಧಾರ್‌ ಕಡ್ಡಾಯಗೊಳಿಸುವ ಮೂಲಕ ನಾಗರಿಕರ ಹಕ್ಕುಗಳನ್ನು ಸರ್ಕಾರ ಕಸಿಯುತ್ತಿದೆ. ಇದು ಸಂವಿಧಾನಬಾಹಿರ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲ ಕಪಿಲ್‌ ಸಿಬಲ್‌ ವಾದಿಸಿದರು.

‘ಡೇಟಾ ಮೇಲೆ ನಿಯಂತ್ರಣ ಹೊಂದಿದವರೇ ಇಡೀ ಜಗತ್ತನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದಾವೋಸ್‌ ಶೃಂಗಸಭೆಯಲ್ಲಿ ಹೇಳಿರುವುದನ್ನು ಸಿಬಲ್‌ ಉಲ್ಲೇಖಿಸಿದರು.

ಇದು ಆಧಾರ್‌ ಅಡಿ ಸಂಗ್ರಹಿಸಿದ ಖಾಸಗಿ ಮಾಹಿತಿ ಹೇಗೆ ದುರ್ಬಳಕೆಯಾಗಬಹುದು ಎಂಬುವುದಕ್ಕೆ ಪೂರಕವಾಗಿದೆ ಎಂದರು.

‘ನಾವು ಡಿಜಿಟಲ್‌ ಯುಗದಲ್ಲಿ ಬದುಕುತ್ತಿದ್ದೇವೆ. ಯಾವುದು ವಾಸ್ತವ, ಯಾವುದು ಕಲ್ಪನೆ ಎಂದು ವಿಂಗಡಿಸುವುದು ಕಷ್ಟ. ನಾಳೆ ಏನಾಗುತ್ತದೆ ಎಂದು ಊಹಿಸುವುದು ಯಾರಿಂದಲೂ ಸಾಧ್ಯವಿಲ್ಲ. ಮಾಹಿತಿಯೇ ಇಂದಿನ ಅತ್ಯಂತ ಪ್ರಬಲ ಅಸ್ತ್ರ. ಈ ಡೇಟಾಗಳ ಮೇಲೆ ನಿಯಂತ್ರಣ ಹೊಂದಿದ ವ್ಯಕ್ತಿ ಭಾರತವನ್ನೂ ನಿಯಂತ್ರಿಸುತ್ತಾನೆ. ಈ ಡೇಟಾಗಳನ್ನು ಮುಂದಿಟ್ಟುಕೊಂಡು ಸರ್ಕಾರ ಅಧಿಕಾರ ಚಲಾಯಿಸಬಹುದು. ಆ ದೃಷ್ಟಿಯಿಂದ ಆಧಾರ್‌ ಸರ್ಕಾರದ ಕೈಯಲ್ಲಿರುವ ಪ್ರಬಲ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆ ಇದೆ’ ಎಂದು ಸಿಬಲ್‌ ಆತಂಕ ವ್ಯಕ್ತಪಡಿಸಿದರು.

ಬಯೊಮೆಟ್ರಿಕ್‌ ಮಾಹಿತಿ ಹೇಗೆಲ್ಲ ದುರುಪಯೋಗ ಆಗಬಹುದು ಎಂಬ ಬಗ್ಗೆ ಅವರು ಅನೇಕ ದೃಷ್ಟಾಂತಗಳನ್ನು ನ್ಯಾಯಾಲಯದ ಮುಂದಿಟ್ಟರು.

ಡಿಜಿಟಲ್‌ ತಂತ್ರಜ್ಞಾನ ಆರ್ಥಿಕತೆ ಮತ್ತು ಕಾರ್ಪೊರೇಟ್‌ ಜಗತ್ತಿಗೆ ಮಾತ್ರ ಪೂರಕವಾಗಿದ್ದು, ಅದನ್ನು ನಿಯಂತ್ರಿಸುವುದು ಕಷ್ಟ ಎಂದರು.

ಅರ್ಜಿದಾರರ ಪರವಾಗಿ ಮತ್ತೊಬ್ಬ ಹಿರಿಯ ವಕೀಲ ಶ್ಯಾಮ್ ದಿವಾನ್‌ ವಾದ ಮಂಡಿಸಿದರು. ಖಾಸಗಿತನ, ಸಾಂವಿಧಾನಿಕ ನಂಬುಗೆಗೆ ಆಧಾರ್‌ ಹೇಗೆ ಮಾರಕ ಎಂದು ಅವರು ನ್ಯಾಯಮೂರ್ತಿಗಳ ಮನವರಿಕೆಗೆ ಯತ್ನಿಸಿದರು.

ನಾಗರಿಕರ ಮೇಲೆ ಕಣ್ಗಾವಲು ಇಡಲು ಮತ್ತು ನಿಯಂತ್ರಣ ಸಾಧಿಸಲು ಸರ್ಕಾರ ಆಧಾರ್‌ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಸ್ಮಾರ್ಟ್‌ ಕಾರ್ಡ್‌ ವ್ಯರ್ಥ’

ಪ್ಲಾಸ್ಟಿಕ್ ಸ್ಮಾರ್ಟ್ ಕಾರ್ಡ್ ಮೇಲೆ ಆಧಾರ್ ಮಾಹಿತಿಯನ್ನು ಮುದ್ರಿಸುವುದು ಅಥವಾ ಲ್ಯಾಮಿನೇಶನ್ ಮಾಡಿಸುವುದರಿಂದ ಅದರಲ್ಲಿನ ಕ್ಯುಆರ್ ಕೋಡ್‌ನ ಗುಣಮಟ್ಟ ಕೆಟ್ಟು, ನಿಷ್ಕ್ರಿಯವಾಗುವ ಸಾಧ್ಯತೆ ಇದೆ ಎಂದು ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಎಚ್ಚರಿಸಿದೆ.

‘ಅನಧಿಕೃತವಾಗಿ ಆಧಾರ್ ಕಾರ್ಡ್‌ ಮುದ್ರಿಸುವುದರಿಂದ ವೈಯಕ್ತಿಕ ಮಾಹಿತಿ ಬಹಿರಂಗವಾಗಬಹುದು. ಸ್ಮಾರ್ಟ್ ಕಾರ್ಡ್ ಮುದ್ರಿಸಲು
₹ 300ರವರೆಗೂ ವ್ಯಯವಾಗುತ್ತದೆ. ಇದು ಅನಗತ್ಯ’ ಎಂದು ಯುಐಡಿಎಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.