ADVERTISEMENT

ದೇಶಕ್ಕೆ ಬರುತ್ತಿವೆ 39 ಸಾವಿರ ಎಕೆ–47 ರೈಫಲ್‌ಗಳು

ಏಜೆನ್ಸೀಸ್
Published 12 ಫೆಬ್ರುವರಿ 2018, 10:21 IST
Last Updated 12 ಫೆಬ್ರುವರಿ 2018, 10:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗಡಿ ಭದ್ರತಾ ಪಡೆಗಳು ಮತ್ತು ರಾಜ್ಯ ಪೊಲೀಸರ ಬಲವನ್ನು ಹೆಚ್ಚಿಸಲು ಬಲ್ಗೇರಿಯಾದಿಂದ 39 ಸಾವಿರ ಎಕೆ–47 ರೈಫಲ್‌ಗಳನ್ನು ಭಾರತ ಖರೀದಿಸುತ್ತಿದೆ.

ಇದರಲ್ಲಿ ಸುಮಾರು 7 ಸಾವಿರ ರೈಫಲ್‌ಗಳನ್ನು ಕಾಶ್ಮೀರ ಕಣಿವೆಯಲ್ಲಿ ಕಣ್ಗಾವಲು ಕಾಯುತ್ತಿರುವ ಸಿಆರ್‌ಪಿಎಫ್‌(ಕೇಂದ್ರ ಮೀಸಲು ಪೊಲೀಸ್‌ ಪಡೆ) ಯೋಧರಿಗೆ ನೀಡಲು ನಿರ್ಧರಿಸಲಾಗಿದೆ.

ಖರೀದಿಸುವ ಈ ಸಾವಿರಾರು ರೈಫಲ್‌ಗಳನ್ನು ದೇಶದ ನಾಲ್ಕು ಭದ್ರತಾ ಪಡೆಗಳ ಯೋಧರು ಮತ್ತು 22 ರಾಜ್ಯಗಳ ಪೊಲೀಸರಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ADVERTISEMENT

ಉಗ್ರರ ನುಸುಳುವಿಕೆ ಹೆಚ್ಚುತ್ತಿರುವ ಜಮ್ಮು–ಕಾಶ್ಮೀರ ಭಾಗದಲ್ಲಿ ಭದ್ರತೆಗಾಗಿ ಹೆಚ್ಚು ರೈಫಲ್‌ಗಳ ಪೂರೈಕೆಯಾಗಲಿದೆ. ದೇಶದ ನಕ್ಸಲ ಪೀಡಿತ ಪ್ರದೇಶಗಳಲ್ಲಿ ಪಹರೆ ಕಾಯುತ್ತಿರುವ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿನ ಬಂಡಾಯ ಹತ್ತಿಕ್ಕುತ್ತಿರುವ ಪಡೆಗಳಿಗೂ ಎಕೆ–47 ಸೇರಲಿವೆ.

‘ಆದಷ್ಟು ಬೇಗ ರೈಫಲ್‌ಗಳು ನಮ್ಮ ಕೈಸೇರಲಿವೆ. ಸಶಸ್ತ್ರ ಪಡೆಗೆ ಮತ್ತಷ್ಟು ಬಲ ತುಂಬಲು ಶೀಘ್ರದಲ್ಲಿ ನೇಮಕಾತಿ ನಡೆಸಬೇಕೆಂಬ ಪ್ರಸ್ತಾವನೆಯನ್ನು ರಕ್ಷಣಾ ಇಲಾಖೆಗೆ ಕಳುಹಿಸಿದ್ದೇವೆ’ ಎಂದು ಸಿಆರ್‌ಪಿಎಫ್‌ ಮಹಾನಿರ್ದೇಶಕ ಆರ್‌.ಆರ್‌.ಭಟ್ನಾಗರ್‌ ತಿಳಿಸಿದ್ದಾರೆ.

2017ರಲ್ಲಿ ಭಯೋತ್ಪಾದಕರು ಕಣಿವೆ ರಾಜ್ಯ ಜಮ್ಮು–ಕಾಶ್ಮೀರದಲ್ಲಿ 342 ಹಿಂಸಾಕೃತ್ಯಗಳನ್ನು ನಡೆಸಿದ್ದರು. ಅವುಗಳಲ್ಲಿ 80 ಯೋಧರು ಹುತಾತ್ಮರಾಗಿ, 40 ನಾಗರಿಕರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.