ADVERTISEMENT

ಸೇನೆಯ ಮೇಜರ್‌ ವಿರುದ್ಧ ಶಿಸ್ತುಕ್ರಮಕ್ಕೆ ತಡೆ: ಸುಪ್ರೀಂಕೋರ್ಟ್‌

ಏಜೆನ್ಸೀಸ್
Published 12 ಫೆಬ್ರುವರಿ 2018, 12:45 IST
Last Updated 12 ಫೆಬ್ರುವರಿ 2018, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾಶ್ಮೀರದ ಸೊಫಿಯಾನ್‌ ಪ್ರದೇಶದಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತೀಯ ಸೇನೆಯ ಮೇಜರ್‌ ಮೇಲೆ ರಾಜ್ಯ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಆಧರಿಸಿ ಕ್ರಮ ಜರುಗಿಸಲು ಸುಪ್ರೀಂಕೋರ್ಟ್‌ ಸೋಮವಾರ ತಡೆ ನೀಡಿದೆ.

ಈ ಪ್ರದೇಶದಲ್ಲಿ ಸೇನೆ ಜನವರಿ 27ರಂದು ‍ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು. ಹಾಗಾಗಿ, ಮೇಜರ್‌ ಆದಿತ್ಯಾ ಕುಮಾರ್‌ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಇದನ್ನು ರದ್ದು ಮಾಡುವಂತೆ ಆದಿತ್ಯಾ ಅವರ ತಂದೆ ಲೆಫ್ಟಿನೆಂಟ್ ಕರ್ನಲ್ ಕರ್ಮವೀರ್‌ ಸಿಂಗ್‌ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ಮಗ ತನ್ನ ಕರ್ತವ್ಯ ನಿರ್ವಹಿಸಿದ್ದಾನೆ. ಅವನ ಮೇಲೆ ದೂರು ದಾಖಲಿಸಿರುವುದು ತಪ್ಪು ಮತ್ತು ನಿರಂಕುಶ ನಿರ್ಧಾರವಾಗಿದೆ’ ಎಂದು ಕರ್ಮವೀರ್‌ ಸಿಂಗ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ADVERTISEMENT

‘ಉದ್ರಿಕ್ತ ಜನರ ಗುಂಪಿನಿಂದ ಸುರಕ್ಷಿತವಾಗಿ ಹೊರಬರಲು ಸೈನಿಕರು ಗುಂಡು ಹಾರಿಸಿದ್ದಾರೆ’ ಎಂದು ಅರ್ಜಿಯಲ್ಲಿ ಬರೆಯಲಾಗಿದೆ.

ಗರ್ವಾಲ್‌ ರೈಫಲ್‌ ಘಟಕದ ಮೇಜರ್‌ ಆದಿತ್ಯಾ ಅವರ ತಂಡ ಸೊಫಿಯಾನದಲ್ಲಿ ಮಾಡಿದ ಫೈರಿಂಗ್‌ನಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು. ಕೊಲೆ ಮತ್ತು ಕೊಲೆಗೆ ಯತ್ನದ ಆರೋಪದಲ್ಲಿ ಪೊಲೀಸರು ಗರ್ವಾಲ್‌ ತಂಡದ ಮೇಲೆ ದೂರು ದಾಖಲಿಸಿಕೊಂಡಿದ್ದರು.

ಈ ಘಟನೆ ಕುರಿತು ಸೇನೆ ಫೆ.1 ರಂದು ಪೊಲೀಸರಿಗೆ ಸ್ಪಷ್ಟನೆ ನೀಡಿದೆ. ‘ಸ್ಥಳೀಯರು ಅಧಿಕಾರಿಗಳ ಮೇಲೆ  ನಡೆಸಬಹುದಾಗಿದ್ದ ಹಲ್ಲೆ, ವಾಹನಗಳಿಗೆ ಆಗುತ್ತಿದ್ದ ಹಾನಿ ಮತ್ತು ಯೋಧರ ಶಸ್ತ್ರಾಸ್ತಗಳನ್ನು ಕಿತ್ತುಕೊಳ್ಳುವುದನ್ನು ತಡೆಯಲು ಗುಂಡು ಹಾರಿಸಲಾಯಿತು’ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

ಕರ್ತವ್ಯ ನಿರತ ಯೋಧರ ಹಕ್ಕುಗಳನ್ನು ರಕ್ಷಿಸಿ, ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತ ನಿಯಮಗಳನ್ನು ರೂಪಿಸಲು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಈ ಎಫ್‌ಐಆರ್‌ ಹಿಂತೆಗೆದುಕೊಳ್ಳಬೇಕು ಎಂದು ಕಾಶ್ಮೀರದ ಬಿಜೆಪಿ ಮುಖಂಡರು ಒತ್ತಾಯಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಈ ಪ್ರಕರಣಕ್ಕೆ ತಾರ್ತಿಕ ಅಂತ್ಯ ಹುಡುಕುವುದಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.