ADVERTISEMENT

6ನೇ ಪ್ರಕರಣದಲ್ಲೂ ಪ್ರಧಾನಿಗೆ ಕ್ಲೀನ್‌ಚಿಟ್

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:15 IST
Last Updated 4 ಮೇ 2019, 20:15 IST
   

ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರನೇ ಪ್ರಕರಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಕ್ಲೀನ್‌ ಚಿಟ್ ನೀಡಿದೆ.

ಗುಜರಾತ್‌ನ ಪಠಾಣ್‌ನಲ್ಲಿ ಮೋದಿ ಅವರು ಏಪ್ರಿಲ್ 21ರಂದು ಮಾಡಿದ್ದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು. ‘ಬಾಲಾಕೋಟ್ ದಾಳಿಯಲ್ಲಿ ಪಾಕಿಸ್ತಾನಕ್ಕೆ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು’ ಎಂದು ಮೋದಿ ಅವರು ಹೇಳಿದ್ದರು. ಈ ಹೇಳಿಕೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ ಎಂದು ಆಯೋಗ ಶನಿವಾರ ಘೋಷಿಸಿದೆ. ಈ ಮುನ್ನ ಮೋದಿ ಅವರ ವಿರುದ್ಧ ದಾಖಲಾಗಿದ್ದ ಐದೂ ಪ್ರಕರಣಗಳಲ್ಲಿ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು.

ಪ್ರಚಾರದಲ್ಲಿ ಸೇನೆಯ ಹೆಸರು ಬಳಕೆಯ ಮೇಲೆ ಇದ್ದ ಮಾರ್ಗಸೂಚಿಯನ್ನು ಮೋದಿ ಅವರು ವಾರಾಣಸಿಯಲ್ಲಿ ತಮ್ಮ ಭಾಷಣದಲ್ಲಿ ಉಲ್ಲಂಘಿಸಿಲ್ಲ ಎಂದು ಆಯೋಗ ಶುಕ್ರವಾರ ಸ್ಪಷ್ಟಪಡಿಸಿತ್ತು.ಅಮಿತ್ ಶಾ ಅವರು ನಾಗಪುರ ಹಾಗೂ ನಾಡಿಯಾದಲ್ಲಿ ಚುನಾವಣಾ ಭಾಷಣದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪಗಳನ್ನೂ ಆಯೋಗ ಕೈಬಿಟ್ಟಿತ್ತು.

ADVERTISEMENT

ಆಯೋಗದಿಂದ ಪಕ್ಷಪಾತ–ರಾಹುಲ್ ಕಿಡಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಕ್ಲೀನ್‌ಚಿಟ್ ನೀಡಿರುವ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಬಿಜೆಪಿ ವಿಚಾರದಲ್ಲಿ ಒಂದು ನಿಲುವು, ಪ್ರತಿಪಕ್ಷಗಳ ವಿಚಾರದಲ್ಲಿ ಮತ್ತೊಂದು ನಿಲುವು ಪ್ರದರ್ಶಿಸುವ ಮೂಲಕ ಚುನಾವಣಾ ಆಯೋಗವು ಪಕ್ಷಪಾತ ನೀತಿ ಅನುಸರಿಸುತ್ತಿದೆ’ ಎಂದು ಅವರು ಕಿಡಿಕಾರಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಂಸ್ಥಿಕ ವ್ಯವಸ್ಥೆಗಳ ಮೇಲೆ ಪ್ರಧಾನಿ ಮೋದಿ ಹಾಗೂ ಬಿಜೆಪಿ, ಆರ್‌ಎಸ್‌ಎಸ್‌ ಒತ್ತಡ ಹೇರುತ್ತಿವೆ. ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ನೀತಿ ಆಯೋಗ, ರಿಸರ್ವ್ ಬ್ಯಾಂಕ್ – ಹೀಗೆ, ಎಲ್ಲ ಕಡೆಯೂ ಇದಕ್ಕೆ ಪುರಾವೆಗಳಿವೆ. ಚುನಾವಣಾ ಆಯೋಗವೂ ಒತ್ತಡದಿಂದ ಹೊರತಾಗಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.