ADVERTISEMENT

60 ಅಡಿ ಉದ್ದದ, 500 ಟನ್‌ ತೂಕದ ಉಕ್ಕಿನ ಸೇತುವೆಯನ್ನು ಎಲ್ಲರ ಕಣ್ಣುದುರೇ ಕದ್ದರು!

ಪಿಟಿಐ
Published 9 ಏಪ್ರಿಲ್ 2022, 15:32 IST
Last Updated 9 ಏಪ್ರಿಲ್ 2022, 15:32 IST
ಸೇತುವೆಯ ಚಿತ್ರ (ಐಎಎನ್‌ಎಸ್‌)
ಸೇತುವೆಯ ಚಿತ್ರ (ಐಎಎನ್‌ಎಸ್‌)   

ಸಸರಾಮ್‌: ಬಿಹಾರದ ಸಸರಾಮ್ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಗುಂಪೊಂದು 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಕೆಡವಿ ಕದ್ದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

500 ಟನ್ ತೂಕದ ಸೇತುವೆಯನ್ನು 1972 ರಲ್ಲಿ ನಸ್ರಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮಿಯಾವರ್ ಗ್ರಾಮದಲ್ಲಿ ಅರ್ರಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು.ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಗುಂಪೊಂದು ಮೂರು ದಿನಗಳ ಕಾಲ ಗ್ಯಾಸ್ ಕಟರ್ ಮತ್ತು ಮಣ್ಣು ತೆಗೆಯುವ ಯಂತ್ರಗಳ ಸಹಾಯದಿಂದ ಶಿಥಿಲಸೇತುವೆಯನ್ನು ಕೆಡವಿ, ಕದ್ದುಕೊಂಡು ಹೋಗಿದ್ದಾರೆಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಾಗುತ್ತಿದೆ ಎಂಬುದನ್ನು ಅರಿತು ಸ್ಥಳೀಯರು ಪೊಲೀಸರಿಗೆ ತಿಳಿಸುವಷ್ಟರಲ್ಲಿ ಅವರು ಕಬ್ಬಿಣದೊಂದಿಗೆ ಪರಾರಿಯಾಗಿದ್ದಾರೆ ಎಂದು ನಸ್ರಿಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುಭಾಷ್ ಕುಮಾರ್ ಹೇಳಿದ್ದಾರೆ.

ADVERTISEMENT

ಸೇತುವೆ ಕಳ್ಳತನದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿಸ್ಕ್ರ್ಯಾಪ್‌ ಡೀಲರ್‌ಗಳಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.

'ಸೇತುವೆ ತುಂಬಾ ಹಳೆಯದಾಗಿತ್ತು. ಅದನ್ನು ಅಪಾಯಕಾರಿ ಎಂದೂ ಘೋಷಿಸಲಾಗಿತ್ತು.ಹಳೆಯದಕ್ಕೆ ಹೊಂದಿಕೊಂಡಂತೆ ಹೊಸ ಕಾಂಕ್ರೀಟ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಅದನ್ನು ಪ್ರಸ್ತುತ ಸ್ಥಳೀಯರು ಬಳಸುತ್ತಿದ್ದಾರೆ' ಎಂದು ಅಮಿಯಾವರ್ ಗ್ರಾಮದ ನಿವಾಸಿ ಮಂಟು ಸಿಂಗ್ ಹೇಳಿದರು.

ಘಟನೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಕಳ್ಳರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕರಿಂದ ಪ್ರೇರಣೆ ಪಡೆದಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

'ಬಿಹಾರದ ಸರ್ಕಾರವನ್ನು ಬಿಜೆಪಿ ಮತ್ತು ನಿತೀಶ್ ಕುಮಾರ್ ಇಬ್ಬರೂ ಸೇರಿಕದಿಯಲು ಸಾಧ್ಯವಾದರೆ, ಸೇತುವೆ ಯಾವ ಲೆಕ್ಕ? ಎಂದು ಕುಹಕವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.