ADVERTISEMENT

ಭಾರತ-ಚೀನಾ ಸೇನಾ ನಿಯೋಗದ ನಡುವೆ 14 ಗಂಟೆ ಮಾತುಕತೆ

ಪಿಟಿಐ
Published 22 ಸೆಪ್ಟೆಂಬರ್ 2020, 11:02 IST
Last Updated 22 ಸೆಪ್ಟೆಂಬರ್ 2020, 11:02 IST
ಸೇನೆಯ ಪರಿಕರಗಳನ್ನು ಹೊತ್ತ ವಾಹನ ಲಡಾಖ್ ನತ್ತ ಸಾಗುತ್ತಿರುವುದು
ಸೇನೆಯ ಪರಿಕರಗಳನ್ನು ಹೊತ್ತ ವಾಹನ ಲಡಾಖ್ ನತ್ತ ಸಾಗುತ್ತಿರುವುದು   

ನವದೆಹಲಿ: ಲಡಾಖ್‌ನ ಆಯಕಟ್ಟಿನ ಸ್ಥಳಗಳಲ್ಲಿ ಘರ್ಷಣೆಯನ್ನು ತಪ್ಪಿಸುವ ಸಂಬಂಧ ಭಾರತ ಮತ್ತು ಚೀನಾ ನಡುವಣ ಸೇನಾ ಹಂತದ 6ನೇ ಸುತ್ತಿನ ಮಾತುಕತೆ ಸುಮಾರು 14 ಗಂಟೆಗಳ ಕಾಲ ನಡೆದಿದೆ.

ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಘರ್ಷಣೆ, ಉದ್ವಿಗ್ನ ಸ್ಥಿತಿಯನ್ನು ತಪ್ಪಿಸುವುದು ಚರ್ಚೆಯ ಕೇಂದ್ರವಾಗಿತ್ತು. ಸುದೀರ್ಘ ಮಾತುಕತೆಯ ಫಲಶ್ರುತಿ ಸದ್ಯಕ್ಕೆ ತಿಳಿದುಬಂದಿಲ್ಲ.

ಆದರೆ, ಚರ್ಚೆ ಸಕಾರಾತ್ಮಕವಾಗಿದ್ದು, ಸಂಧಾನ ಮಾತುಕತೆಯನ್ನು ಇನ್ನಷ್ಟು ಮುಂದುವರಿಸಲು ಉಭಯ ಬಣಗಳು ತೀರ್ಮಾನಿಸಿವೆ ಎಂದು ಮಂಗಳವಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಚರ್ಚೆಯಲ್ಲಿ ಭಾರತೀಯ ನಿಯೋಗವು, ಆಯಕಟ್ಟಿನ ತಾಣಗಳಿಂದ ಚೀನಾ ತನ್ನ ಸೇನೆಯನ್ನು ಆದಷ್ಟು ಶೀಘ್ರ ಹಿಂಪಡೆಯಬೇಕು. ಸೇನೆ ಹಿಂಪಡೆಯುವ ನಿಟ್ಟಿನಲ್ಲಿ ಚೀನಾ ಮೊದಲ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿತು ಎಂದು ಮೂಲಗಳು ತಿಳಿಸಿವೆ.

ಉಭಯ ರಾಷ್ಟ್ರಗಳ ನಡುವೆ ಮಾಸ್ಕೊದಲ್ಲಿ ಆಗಿರುವ ಐದು ಅಂಶಗಳ ಒಪ್ಪಂದವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಭಾರತೀಯ ನಿಯೋಗ ಮನದಟ್ಟು ಮಾಡಿಕೊಟ್ಟಿತು.

ಅಲ್ಲದೆ, ನಿರ್ದಿಷ್ಟ ಕಾಲಮಿತಿಯಲ್ಲಿ ಒಡಂಬಡಿಕೆಯನ್ನು ಜಾರಿಗೊಳಿಸಲು ನಿಯೋಗ ಒತ್ತು ನೀಡಿತು. ಮಾಸ್ಕೊದಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್.ಸಿ.ಒ) ಶೃಂಗಸಭೆಯ ವೇಳೆ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಚೀನಾದ ಸಚಿವ ವಾಂಗ್ ಯೀ ಅವರ ನಡುವೆ ಮಾತುಕತೆ ವೇಳೆ ಐದು ಅಂಶಗಳ ಒಪ್ಪಂದಕ್ಕೆ ಬರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.