ADVERTISEMENT

ಲೂಧಿಯಾನದಲ್ಲಿ ಬೆಂಕಿ ಅವಘಡ: ಒಂದೇ ಕುಟುಂಬದ ಏಳು ಮಂದಿ ಸಾವು

ಪಿಟಿಐ
Published 20 ಏಪ್ರಿಲ್ 2022, 14:42 IST
Last Updated 20 ಏಪ್ರಿಲ್ 2022, 14:42 IST
ಬೆಂಕಿ ತುತ್ತಾಗಿ ಸುಟ್ಟು ಕರಕಲಾಗಿರುವ ಗುಡಿಸಲು
ಬೆಂಕಿ ತುತ್ತಾಗಿ ಸುಟ್ಟು ಕರಕಲಾಗಿರುವ ಗುಡಿಸಲು   

ಲೂಧಿಯಾನ, ಪಂಜಾಬ್‌: ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಒಂದೇ ಕುಟುಂಬದ ಏಳು ಜನರು ಸಜೀವ ದಹನವಾಗಿರುವ ಘಟನೆಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ.

ಮೃತರು ಬಿಹಾರದ ಸಮಸ್ತಿಪುರ ಜಿಲ್ಲೆಯ ಬೊಗೊಪುರ ಗ್ರಾಮದವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದರು ಎಂದು ತಿಬ್ಬಾ ಪೊಲೀಸ್‌ ಠಾಣೆಯ ಠಾಣಾಧಿಕಾರಿ ರಣ್‌ಬೀರ್‌ ಸಿಂಗ್‌ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಪೊಲೀಸ್‌ ಆಯುಕ್ತ (ಪೂರ್ವ ವಲಯ) ಸುರಿಂದರ್‌ ಸಿಂಗ್‌, ‘ತಿಬ್ಬಾ ರಸ್ತೆ ಬಳಿಯಲ್ಲಿರುವ ತಮ್ಮ ಗುಡಿಸಲಿನಲ್ಲಿ ಸಾಹ್ನಿ ಕುಟುಂಬದವರು ಮ‍ಲಗಿರುವ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಸಾಹ್ನಿಯ ನೆರೆಮನೆಯವರಾದ ಬಿಂದೇಶಿ ಶರ್ಮಾ, ‘ಸಾಹ್ನಿ ಲೂಧಿಯಾನಕ್ಕೆ ಬಂದು 25 ವರ್ಷವಾಯಿತು. ಬೆಂಕಿ ಅವಘಡ ಸಂಭವಿಸುವುದಕ್ಕೂ ಮುಂಚೆ ಬಡಾವಣೆಯಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಬೇಕು’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಠಾಣಾಧಿಕಾರಿ ರಣ್‌ಬೀರ್‌ ಸಿಂಗ್‌, ‘ಪ್ರಾಥನಿಕ ತನಿಖೆಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ವಿಧಿ ವಿಜ್ಞಾನ ತಂಡದವರು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಹತ್ತಿರದ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.