ADVERTISEMENT

ಶೇ 73ರಷ್ಟು ಮಹಿಳೆಯರು ಮುಟ್ಟಿನ ರಜೆ ಬಯಸುತ್ತಾರೆ: ಸಮೀಕ್ಷೆ

ಪಿಟಿಐ
Published 26 ಮೇ 2023, 19:38 IST
Last Updated 26 ಮೇ 2023, 19:38 IST
.
.   

ನವದೆಹಲಿ: ಮುಟ್ಟಿನ ರಜೆ ತೆಗೆದುಕೊಳ್ಳಲು ತಾವು ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳು ಅವಕಾಶ ನೀಡಬೇಕೆಂದು ಶೇ 73ರಷ್ಟು ಮಹಿಳೆಯರು ಬಯಸುತ್ತಾರೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹೇಳಿದೆ.

ನೈರ್ಮಲ್ಯಕ್ಕೆ ಆದ್ಯತೆ ಇರುವ ಮತ್ತು ಮಹಿಳೆಯರಿಗೆ ಸುಲಭವಾಗಿ ಸಿಗುವ ನೈರ್ಮಲ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಹೊಂದಿದ ಋತುಚಕ್ರ ಸ್ನೇಹಿ ಕೆಲಸದ ಸ್ಥಳದ ಬಗ್ಗೆ ಶೇ 86.6ರಷ್ಟು ಮಹಿಳೆಯರು ಒಲವು ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ವೈಯಕ್ತಿಕ ಆರೋಗ್ಯಕ್ಕೆ ಸಂಬಂಧಿಸಿ ‘ಎವರ್‌ಟೀನ್‌’ ಬ್ರ್ಯಾಂಡ್‌ನಡಿ ಉತ್ಪನ್ನಗಳನ್ನು ತಯಾರಿಸುವ ವೆಟ್‌ ಅಂಡ್‌ ಡ್ರೈ ಪರ್ಸನಲ್‌ ಕೇರ್‌ ಎಂಬ ಕಂಪನಿ ಇತ್ತೀಚೆಗೆ ನಡೆಸಿರುವ ‘ಋತುಚಕ್ರ ನೈರ್ಮಲ್ಯ ಸಮೀಕ್ಷೆ 2023’ರಲ್ಲಿ ಈ ಮಾಹಿತಿ ಇದೆ.

ADVERTISEMENT

‘ಮುಟ್ಟಿನ ರಜೆ ತೆಗೆದುಕೊಂಡ ಅವಧಿಗೆ ವೇತನ ನೀಡುವುದನ್ನು ತಾವು ಬಯಸುವುದಿಲ್ಲ ಎಂಬುದಾಗಿ ಶೇ 71.7ರಷ್ಟು ಮಹಿಳೆಯರು ತಿಳಿಸಿದ್ದಾರೆ. ಈ ಅವಧಿಯ ವೇತನ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಂಪನಿಗಳು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂಬ ಭಯವೇ ಇದಕ್ಕೆ ಕಾರಣ’ ಎಂಬುದನ್ನೂ ಸಮೀಕ್ಷೆ ಬಹಿರಂಗಪಡಿಸಿದೆ.

ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌, ಕೋಲ್ಕತ್ತ, ಚೆನ್ನೈ, ಪುಣೆ, ಅಹಮದಾಬಾದ್‌, ಲಖನೌ ಮತ್ತು ಪಟ್ನಾ ಸೇರಿದಂತೆ ವಿವಿಧ ನಗರಗಳಲ್ಲಿ ನಡೆಸಿರುವ ಈ ಸಮೀಕ್ಷೆಯಲ್ಲಿ 18 ರಿಂದ 35 ವರ್ಷದೊಳಗಿನ 10 ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು.

ಮೇ 28ರಂದು ‘ವಿಶ್ವ ಋತುಚಕ್ರ ನೈರ್ಮಲ್ಯ ದಿನ’ವಿದ್ದು, ಈ ಅಂಗವಾಗಿ ಸಮೀಕ್ಷೆಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.

ಉದ್ಯೋಗ ಸ್ಥಳವು ಋತುಚಕ್ರ ಸ್ನೇಹಿಯಾಗಿರುವಂತೆ ಮಾಡುವ ವಿಧಾನಗಳನ್ನು ಅಳವಡಿಸಿಕೊಳ್ಳಲು ಕಾರ್ಪೊರೇಟ್‌ ಕಂಪನಿಗಳು ಆದ್ಯತೆ ನೀಡಬೇಕು ಎಂದು ಪಿಎಎನ್ ಹೆಲ್ತ್‌ಕೇರ್‌ ಸಂಸ್ಥೆಯ ಸಿಇಒ ಚಿರಾಗ್‌ ಪಾನ್‌ ಅವರು ಹೇಳಿದ್ದಾರೆ.

‘ಕೇವಲ ಶೇ 5.2ರಷ್ಟು ಮಹಿಳೆಯರು ತಮ್ಮ ವ್ಯವಸ್ಥಾಪಕರ ಜೊತೆ ಮುಟ್ಟಿನ ಕುರಿತು ಚರ್ಚಿಸಲು ಸಂಕೋಚಪಡುವುದಿಲ್ಲ. ಶೇ 39.9ರಷ್ಟು ಮಹಿಳೆಯರು ಮುಟ್ಟಿನ ಕುರಿತು ಕೆಲಸದ ಸ್ಥಳದಲ್ಲಿ ಮಾತನಾಡಲು ಬಯಸುವುದಿಲ್ಲ. ತಮ್ಮ ಮಹಿಳಾ ಸಹೋದ್ಯೋಗಿಗಳ ಜೊತೆಗೆ ಸಹ ಅವರು ಈ ಕುರಿತು ಚರ್ಚಿಸಲು ಇಷ್ಟಪಡುವುದಿಲ್ಲ ಎಂಬುದೂ ನಮ್ಮ ಸಮೀಕ್ಷೆಯಿಂದ ತಿಳಿದು ಬಂದಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.