ADVERTISEMENT

ಮಹಾರಾಷ್ಟ್ರ | ಮಾಟಮಂತ್ರದ ಶಂಕೆ; ಮಹಿಳೆಗೆ ಥಳಿಸಿ, ಮೂತ್ರ ಕುಡಿಸಿದ ಗ್ರಾಮಸ್ಥರು

ಪಿಟಿಐ
Published 18 ಜನವರಿ 2025, 8:02 IST
Last Updated 18 ಜನವರಿ 2025, 8:02 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಅಮರಾವತಿ: 77 ವರ್ಷದ ಮಹಿಳೆಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ, ಕಬ್ಬಿಣದ ಸಲಾಕೆಯಿಂದ ಬರೆ ಹಾಕಿರುವ ಪ್ರಕರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಗ್ರಾಮವೊಂದರಲ್ಲಿ ವರದಿಯಾಗಿದೆ. ಮಹಿಳೆಯು ಮಾಟಮಂತ್ರ ಮಾಡುತ್ತಾರೆಂದು ಶಂಕಿಸಿ ಈ ಕೃತ್ಯವೆಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್‌ 30ರಂದು ಕೃತ್ಯ ನಡೆದಿದ್ದು, ಸಂತ್ರಸ್ತೆಯ ಮಗ ಮತ್ತು ಸೊಸೆ ಈ ತಿಂಗಳ ಆರಂಭದಲ್ಲೇ ಪೊಲೀಸರಿಗೆ ದೂರು ನೀಡಿದ್ದರು. ಆದಾಗ್ಯೂ, ಶುಕ್ರವಾರ ಮೇಲಾಧಿಕಾರಿಗಳನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸಂತ್ರಸ್ತೆಯು ಚಿಖಲ್ದಾರ ತಾಲ್ಲೂಕಿನ ರೆತ್ಯಖೇಡ ಗ್ರಾಮದವರು.

ದೂರುದಾರರು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ, ಸಂತ್ರಸ್ತೆಯು ಡಿಸೆಂಬರ್‌ 30ರಂದು ಮನೆಯಲ್ಲಿ ಒಬ್ಬರೇ ಇದ್ದರು. ಆಗ ಮನೆಗೆ ನುಗ್ಗಿದ ನೆರೆಹೊರೆಯವರು ಬಲವಂತವಾಗಿ ಅವರನ್ನು ಹಿಡಿದು, ಮಾಟಮಂತ್ರ ಮಾಡುತ್ತಿರುವೆ ಎಂದು ಆರೋಪಿಸಿ ಥಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಮಹಿಳೆ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿ, ಕೈ–ಕಾಲುಗಳ ಮೇಲೆ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ್ದಾರೆ. ಬಲವಂತವಾಗಿ ಮೂತ್ರ ಕುಡಿಸಿ, ನಾಯಿಯ ಮಲ ತಿನ್ನಿಸಿ, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಎಂದೂ ದೂರಲಾಗಿದೆ.

ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದ ಸಂತ್ರಸ್ತೆಯ ಮಗ ಮತ್ತು ಸೊಸೆ, ವಿಷಯ ತಿಳಿಯುತ್ತಿದ್ದಂತೆ ಜನವರಿ 5ರಂದು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಅಮರಾವತಿ ಎಸ್‌ಪಿ ವಿಶಾಲ್‌ ಆನಂದ್‌, ಇದು ಗಂಭೀರವಾದ ವಿಚಾರ. ದೂರುದಾರರು ಶುಕ್ರವಾರ ತಮ್ಮನ್ನು ಭೇಟಿ ಮಾಡಿದ್ದಾರೆ. ಘಟನೆ ನಡೆದಿರುವ ಗ್ರಾಮವು ಕಾಡಂಚಿನಲ್ಲಿದ್ದು, ಪರಿಶೀಲನೆ ಸಲುವಾಗಿ ಪೊಲೀಸ್‌ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಅದರಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ದೂರು ದಾಖಲಾಗಿರುವ ಠಾಣೆಯ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.