ADVERTISEMENT

60 ಅಡಿಯ ಉಕ್ಕಿನ ಸೇತುವೆ ಕಳವು: ಸರ್ಕಾರಿ ಅಧಿಕಾರಿಗಳೂ ಸೇರಿ 8 ಜನರ ಬಂಧನ

ಪಿಟಿಐ
Published 11 ಏಪ್ರಿಲ್ 2022, 2:54 IST
Last Updated 11 ಏಪ್ರಿಲ್ 2022, 2:54 IST
ಕಳುವಾಗಿರುವ ಉಕ್ಕಿನ ಸೇತುವೆ
ಕಳುವಾಗಿರುವ ಉಕ್ಕಿನ ಸೇತುವೆ   

ಪಟ್ನಾ: ಬಿಹಾರದಲ್ಲಿ 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನು ಅಕ್ರಮವಾಗಿ ಕೆಡವಿ, ಕದ್ದ ಆರೋಪದ ಮೇಲೆ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಸಸರಾಮ್‌ ಜಿಲ್ಲೆಯ ಅರ್ರಾ ಕಾಲುವೆಗೆ ಅಡ್ಡಲಾಗಿ 1972ರಲ್ಲಿ ನಿರ್ಮಿಸಲಾಗಿದ್ದ 500 ಟನ್‌ ತೂಕದ ಉಕ್ಕಿನ ಸೇತುವೆಯನ್ನು ಇತ್ತೀಚೆಗೆ ಕದಿಯಲಾಗಿತ್ತು. ಸದ್ಯ ಸೆರೆಯಾದವರ ಪೈಕಿ ಉಪವಿಭಾಗಾಧಿಕಾರಿ ಮತ್ತು ಹವಾಮಾನ ಇಲಾಖೆಯ ಅಧಿಕಾರಿಯೂ ಇದ್ದಾರೆ. ಹವಾಮಾನ ಇಲಾಖೆಯ ಅಧಿಕಾರಿ ಅರವಿಂದ್ ಕುಮಾರ್ ಅವರು ಗ್ಯಾಸ್ ಕಟ್ಟರ್ ಮತ್ತು ಇತರ ಸಲಕರಣೆಗಳನ್ನು ಗುಂಪಿಗೆ ಪೂರೈಸಿರುವುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಸೇತುವೆ ಕೆಡುವುತ್ತಿರುವುದರ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ, ಸರ್ಕಾರದ ಸೂಚನೆಯಂತೇ ಈ ಕೆಲಸ ಮಾಡುತ್ತಿರುವುದಾಗಿ ಅರವಿಂದ ಕುಮಾರ್ ಮತ್ತು ಇತರರು ಸುಳ್ಳು ಹೇಳಿದ್ದರು. ಉಕ್ಕಿನ ಸೇತುವೆ ಬಳಕೆ ನಿಂತುಹೋಗಿದ್ದರಿಂದ ಗ್ರಾಮಸ್ಥರೂ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಸದ್ಯ ಅರವಿಂದ ಕುಮಾರ್‌ನನ್ನು ಸೆರೆ ಹಿಡಿದಿದ್ದೇವೆ. ಈ ಭಾಗದ ಎಸ್‌ಡಿಒ, ರಾಧೆ ಶ್ಯಾಮ್ ಸಿಂಗ್ ದರೋಡೆಯ ಮಾಸ್ಟರ್ ಮೈಂಡ್ ಎಂಬುದು ಗೊತ್ತಾಗಿದೆ. ಎಸ್‌ಡಿಒ ಮತ್ತು ಆತನ ಇತರ ಆರು ಸಹಚರರನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.

‌‘ಅಕ್ರಮ ಕಾರ್ಯಾಚರಣೆಗೆ ಬಳಸಲಾಗಿದ್ದ ಜೆಸಿಬಿ ಯಂತ್ರ, ಪಿಕ್‌ಅಪ್‌ ವ್ಯಾನ್‌, ಬಳಸಿದ್ದ ಗ್ಯಾಸ್‌ ಕಟ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.