ಬಂಧನ
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ಎಂಟು ವರ್ಷಗಳ ಹಿಂದೆ ದೆಹಲಿಯಲ್ಲಿ ತನ್ನ ಗೆಳತಿ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
2017ರ ನವೆಂಬರ್ 16ರಂದು 31 ವರ್ಷದ ಅರ್ಜುನ್ ಕುಮಾರ್ ಅಲಿಯಾಸ್ ಭೋಲಾ ಎಂಬಾತ ತನ್ನ ಗೆಳತಿಯ ಕತ್ತು ಸೀಳಿ, ಹಲವು ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿ ನೇಪಾಳಕ್ಕೆ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಅರ್ಜುನ್ ಕುಮಾರ್ ಬಗ್ಗೆ ಸುಳಿವು ಕೊಟ್ಟವರಿಗೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಅರ್ಜುನ್ ಭಾರತದಿಂದ ಪರಾರಿಯಾದ ಬಳಿಕ ನೇಪಾಳದಲ್ಲಿ ಮತ್ತೊಂದು ಘೋರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. ನೇಪಾಳ ನಿವಾಸಿಯಾದ ಆತನ ಸ್ನೇಹಿತ ನೌಸಾದ್‌ನ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದ. ಇದಕ್ಕೆ ಆಕೆಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದ ಕುಮಾರ್, ಸಹಚರರೊಂದಿಗೆ ಸೇರಿ ಮಹಿಳೆಯ ತಾಯಿಯನ್ನು ಕತ್ತು ಸೀಳಿ ಕೊಲೆ ಮಾಡಿದ್ದರು. ಘಟನೆ ಸಂಬಂಧ ತಪ್ಪು ಸಾಬೀತಾದ ಕಾರಣ ಅಲ್ಲಿನ ನ್ಯಾಯಾಲಯವು ಅರ್ಜುನ್‌ಗೆ 25 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಚೆಗೆ ನೇಪಾಳದಲ್ಲಿ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಇದೇ ವೇಳೆ 20ಕ್ಕೂ ಹೆಚ್ಚು ಜೈಲುಗಳಿಂದ 15 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದರು. ಹೀಗೆ ಪರಾರಿಯಾದ ಕೈದಿಗಳ ಪೈಕಿ ಅರ್ಜುನ್ ಕೂಡಾ ಒಬ್ಬನಾಗಿದ್ದ. ಅಂತರರಾಷ್ಟ್ರೀಯ ಗಡಿ ಮೂಲಕ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ವೇಳೆ ಅರ್ಜುನ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.