ADVERTISEMENT

ಮಕ್ಕಳಿದ್ದರೂ ಸರ್ಕಾರಕ್ಕೆ ₹1.5 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿದ ಹಿರಿಯ ವ್ಯಕ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2023, 10:22 IST
Last Updated 6 ಮಾರ್ಚ್ 2023, 10:22 IST
ನಾಥು ಸಿಂಗ್‌
ನಾಥು ಸಿಂಗ್‌   

ಲಖನೌ: ಉತ್ತರಪ್ರದೇಶದಲ್ಲಿ 85 ವರ್ಷದ ವೃದ್ಧರೊಬ್ಬರು ತಮ್ಮ ₹1.5 ಕೋಟಿ ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ಉಯಿಲು ಬರೆದಿದ್ದಾರೆ.

ಮುಜಾಫರ್‌ನಗರದ ನಿವಾಸಿಯಾದ ನಾಥು ಸಿಂಗ್‌ ಎಂಬುವರು ಸರ್ಕಾರಕ್ಕೆ ಆಸ್ತಿಯನ್ನು ಬರೆದಿರುವುದು ಮಾತ್ರವಲ್ಲದೇ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ಅಲ್ಲದೇ ತಾವು ಮೃತಪಟ್ಟ ಬಳಿಕ ಅಂತಿಮ ವಿಧಿಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ನಾಥು ಸಿಂಗ್‌ ಅವರಿಗೆ ನಾಲ್ವರು ಹೆಣ್ಣು ಮಕ್ಕಳು, ಒಬ್ಬ ಮಗನಿದ್ದಾನೆ. ಎಲ್ಲರಿಗೂ ಮದುವೆಯಾಗಿದೆ. ಪುತ್ರ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಹೆಣ್ಣು ಮಕ್ಕಳು ಇಲ್ಲಿಗೆ ಸಮೀಪ ಇರುವ ಸಹರಾನಪುರದಲ್ಲಿ ವಾಸವಾಗಿದ್ದಾರೆ.

ADVERTISEMENT

ನಾಥು ಸಿಂಗ್‌ ಅವರು ತಮ್ಮ ಪತ್ನಿ ನಿಧನರಾದ ಬಳಿಕ ವೃದ್ಧಾಶ್ರಮ ಸೇರಿದರು. ಸದ್ಯ ಅವರು ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ನನ್ನನ್ನು ನೋಡಲು ಇಲ್ಲಿಗೆ ಯಾರು ಬರುತ್ತಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಯಸ್ಸಿನಲ್ಲಿ, ನನ್ನ ಮಗ ಮತ್ತು ಸೊಸೆಯೊಂದಿಗೆ ನಾನು ವಾಸಿಸಬೇಕಾಗಿತ್ತು ಆದರೆ ಅವರು ನನ್ನ ಸರಿಯಾಗಿ ನೋಡಿಕೊಳ್ಳಲಿಲ್ಲ. ಅದಕ್ಕಾಗಿಯೇ ನಾನು ವೃದ್ಧಾಶ್ರಮ ಸೇರಿದೆ ಎಂದು ಹೇಳಿದ್ದಾರೆ.

ನನ್ನ ಮನೆ ಹಾಗೂ ಜಮೀನನ್ನು ಸರ್ಕಾರಕ್ಕೆ ಉಯಿಲು ಬರೆಯಲಾಗಿದೆ. ಇಲ್ಲಿ ಆಸ್ಪತ್ರೆ ಅಥವಾ ಶಾಲೆಯನ್ನು ಸರ್ಕಾರ ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ನನ್ನ ದೇಹವನ್ನು ದಾನ ಮಾಡಿದ್ದು ಇದು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ನಾಥು ಸಿಂಗ್‌ ಅವರು ಇಲ್ಲಿಗೆ ಬಂದು ವಾಸ ಮಾಡಲು ಆರಂಭಿಸಿದ್ದಾಗಿನಿಂದ ಅವರ ಮಕ್ಕಳು ಯಾರು ಕೂಡ ನೋಡಲು ಇಲ್ಲಿಗೆ ಬಂದಿಲ್ಲ ಎಂದು ವೃದ್ಧಾಶ್ರಮದ ವ್ಯವಸ್ಥಾಪಕಿ ಹೇಳಿದ್ದಾರೆ. ಇದರಿಂದ ನೊಂದು ಅವರು ಆಸ್ತಿಯನ್ನು ದಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಾಥು ಸಿಂಗ್‌ ಅವರ ಉಯಿಲಿನ ಅಫಿಡವಿಟ್ ಸ್ವೀಕರಿಸಿದ್ದೇವೆ ಮತ್ತು ಅವರ ಮರಣದ ನಂತರ ಅದು ಜಾರಿಗೆ ಬರಲಿದೆ ಎಂದು ಇಲ್ಲಿನ ಸಬ್‌ ರಿಜಿಸ್ಟ್ರಾರ್ ಮಾಧ್ಯಮಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.