ವೇತನ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ನವದೆಹಲಿ: ಎಂಟನೇ ವೇತನ ಆಯೋಗ ರಚನೆಯ ನಿಯಮ ಮತ್ತು ನಿಬಂಧನೆಗಳಿಗೆ (ಟಿಒಆರ್) ಕೇಂದ್ರ ಸಚಿವ ಸಂಪುಟವು ಮಂಗಳವಾರ ಅನುಮೋದನೆ ನೀಡಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅಧ್ಯಕ್ಷತೆಯಲ್ಲಿ 8ನೇ ವೇತನ ಆಯೋಗ ರಚಿಸಲಾಗಿದೆ. ಆಯೋಗಕ್ಕೆ ತಾತ್ವಿಕ ಒಪ್ಪಿಗೆ ಲಭಿಸಿ ಒಂಬತ್ತು ತಿಂಗಳಾದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನ ಕೇಂದ್ರ ಸಚಿವ ಸಂಪುಟ ‘ಟಿಒಆರ್‌ಗೆ’ ಅನುಮೋದನೆ ನೀಡಿದೆ.
ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.
ಆಯೋಗ ರಚನೆಯಾದ ದಿನದಿಂದ 18 ತಿಂಗಳ ಒಳಗಾಗಿ ಅಂತಿಮ ವರದಿ ಸಲ್ಲಿಸಬೇಕಿದೆ. ಆಯೋಗದ ಶಿಫಾರಸುಗಳು 2026ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗುವ ಸಾಧ್ಯತೆ ಇದೆ.
‘ಕೇಂದ್ರ ಸರ್ಕಾರದ ಸುಮಾರು 50 ಲಕ್ಷದಷ್ಟು ನೌಕರರಿಗೆ ಮತ್ತು 69 ಲಕ್ಷದಷ್ಟು ಪಿಂಚಣಿದಾರರಿಗೆ 8ನೇ ವೇತನ ಆಯೋಗದ ಶಿಫಾರಸಿನ ಪ್ರಯೋಜನಗಳು ದೊರೆಯಲಿವೆ. ಆಯೋಗವು ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯದ ನೌಕರರಿಗೆ ಈಗಿರುವ ವೇತನ, ಭತ್ಯೆ ಮತ್ತಿತರೆ ಸೌಲಭ್ಯಗಳು ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಲಭ್ಯ ಇರುವ ಸಂಪನ್ಮೂಲಗಳನ್ನು ಗಮನಕ್ಕೆ ತೆಗೆದುಕೊಳ್ಳಲಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡಲಿದೆ.
8ನೇ ವೇತನ ಆಯೋಗದಲ್ಲಿ ಬೆಂಗಳೂರಿನ ಐಐಎಂನ ಪ್ರೊ. ಪುಲಕ್ ಘೋಷ್ ಅರೆಕಾಲಿಕ ಸದಸ್ಯರಾಗಿ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ರಂಜನಾ ಪ್ರಕಾಶ್ ದೇಸಾಯಿ ಅವರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆಯೂ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ಮತ್ತು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ತಜ್ಞರ ಸಮಿತಿ ಅಧ್ಯಕ್ಷೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನಂತರ ಅವರು ವಹಿಸಿಕೊಳ್ಳುತ್ತಿರುವ ನಾಲ್ಕನೆಯ ಮಹತ್ವದ ಹೊಣೆಗಾರಿಕೆ ಇದಾಗಿದೆ.
8ನೇ ವೇತನ ಆಯೋಗದ ಶಿಫಾರಸುಗಳು ಎಂದಿನಿಂದ ಜಾರಿಗೆ ಬರುತ್ತವೆ ಎನ್ನುವುದು ಆಯೋಗ ಮಧ್ಯಂತರ ವರದಿ ನೀಡಿದ ನಂತರ ಖಚಿತವಾಗುತ್ತದೆ. ಆದರೂ ಇದು 2026ರ ಜನವರಿ 1ರಿಂದಲೇ ಜಾರಿಗೆ ಬರಬಹುದುಅಶ್ವಿನಿ ವೈಷ್ಣವ್, ಕೇಂದ್ರ ಸಚಿವ
ಪ್ರತಿ 10 ವರ್ಷಗಳಿಗೊಮ್ಮೆ ಜಾರಿ
ಸಾಮಾನ್ಯವಾಗಿ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಜಾರಿಗೊಳಿಸಲಾಗುತ್ತದೆ. ಇದೇ ಸಂಪ್ರದಾಯದಂತೆ 8ನೇ ವೇತನ ಆಯೋಗದ ಶಿಫಾರಸುಗಳು 2026ರ ಜ.1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. 7ನೇ ವೇತನ ಆಯೋಗವನ್ನು 2014ರ ಫೆಬ್ರುವರಿಯಲ್ಲಿ ರಚಿಸಲಾಗಿತ್ತು. ಆಯೋಗದ ಶಿಫಾರಸುಗಳು 2016ರ ಜನವರಿ 1ರಿಂದ ಜಾರಿಗೆ ಬಂದಿದ್ದವು.
ರಸಗೊಬ್ಬರ ಸಬ್ಸಿಡಿ ಏರಿಕೆ
2025–26ನೇ ಸಾಲಿನ ಹಿಂಗಾರು ಹಂಗಾಮಿಗೆ ಯೂರಿಯಾ ಹೊರತುಪಡಿಸಿ ರಂಜಕ –ಪಿ ಮತ್ತು ಗಂಧಕ–ಎಸ್ (ಡಿಎಪಿ ಎಂಒಪಿ ಎಸ್‌ಎಸ್‌ಪಿ ಎನ್‌ಪಿಕೆ ಮತ್ತು ಕಾಂಪ್ಲೆಕ್ಸ್) ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ₹37952 ಕೋಟಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಿಂಗಾರು ಹಂಗಾಮು ಅಕ್ಟೋಬರ್ 10ರಿಂದ ಆರಂಭಗೊಂಡಿದ್ದು ಮುಂದಿನ ವರ್ಷದ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. 2025ರ ಮುಂಗಾರು ಹಂಗಾಮಿನ ರಸಗೊಬ್ಬರ ಸಬ್ಸಿಡಿಗೆ ಹೋಲಿಸಿದರೆ ಈ ಮೊತ್ತವು ₹736 ಕೋಟಿಯಷ್ಟು ಹೆಚ್ಚಿದೆ. ಕೆ.ಜಿಗೆ ₹43.60 ಇದ್ದ ರಂಜಕದ ಸಬ್ಸಿಡಿಯು ಈಗ ₹47.96ಕ್ಕೆ ಏರಿಕೆಯಾಗಿದೆ. ಗಂಧಕದ ಸಬ್ಸಿಡಿ ಕೆ.ಜಿಗೆ ₹1.77ರಿಂದ ₹2.87ಕ್ಕೆ ಏರಿಕೆಯಾಗಿದೆ. ನೈಟ್ರೊಜನ್ ಮತ್ತು ಪೊಟ್ಯಾಶ್ ರಸಗೊಬ್ಬರದ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇವು ಕ್ರಮವಾಗಿ ಕೆ.ಜಿಗೆ ₹43.02 ಮತ್ತು ₹2.38 ಇವೆ. ಡಿಎಪಿ ಮತ್ತು ಟಿಎಸ್‌ಪಿ ರಸಗೊಬ್ಬರದ ದರದಲ್ಲಿ ಸರ್ಕಾರ ಪರಿಷ್ಕರಣೆ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.