ADVERTISEMENT

ಆಧಾರ್‌ ಕಾರ್ಡ್‌ ನೆರವಿನಿಂದ 10 ವರ್ಷಗಳ ಬಳಿಕ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 13:04 IST
Last Updated 10 ಜುಲೈ 2021, 13:04 IST

ಮುಂಬೈ: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥ ಬಾಲಕ ‘ಆಧಾರ್‌ ಕಾರ್ಡ್‌‘ ನೆರವಿನಿಂದ ಮತ್ತೆ ಪೋಷಕರ ಮಡಿಲು ಸೇರಿರುವ ಘಟನೆ ವರದಿಯಾಗಿದೆ.

ಕಾಣೆಯಾಗಿದ್ದ ಬಾಲಕನನ್ನು ಮೊಹಮ್ಮದ್‌ ಅಮೀರ್‌ ಎಂದು ಗುರುತಿಸಲಾಗಿದೆ. 10 ವರ್ಷಗಳಿಂದ ಅಮೀರ್‌ನನ್ನು ಮಹಾರಾಷ್ಟ್ರದ ನಾಗಪುರದಲ್ಲಿ ನೆಲೆಸಿರುವ ಸಮರ್ಥ್‌ ದಾಮ್ಲೆ ಎಂಬುವವರು ಸಾಕುತ್ತಿದ್ದರು. ಕಳೆದ ಜೂನ್‌ 30ರಂದು ಮೊಹಮ್ಮದ್‌ ಅಮೀರ್‌ನನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

2011ರಲ್ಲಿ 8 ವರ್ಷದ ಮೊಹಮ್ಮದ್‌ ಅಮೀರ್‌ ಮಧ್ಯಪ್ರದೇಶದ ಜಬಲ್‌ಪುರ್‌ ರೈಲು ನಿಲ್ದಾಣದಿಂದ ಕಾಣೆಯಾಗಿದ್ದ. ಮಾತು ಬಾರದು ಅಮೀರ್‌ ನಾಗಪುರ ರೈಲು ನಿಲ್ದಾಣಕ್ಕೆ ಬಂದು ಇಳಿದಿದ್ದ. ಸ್ಥಳೀಯ ಪೊಲೀಸರು ಅಮೀರ್‌ನನ್ನು ದಾಮ್ಲೆ ಅವರು ನಡೆಸುತ್ತಿದ್ದ ಅನಾಥಾಶ್ರಮಕ್ಕೆ ಸೇರಿಸಿದ್ದರು. 2015ರಲ್ಲಿ ಹಣಕಾಸು ತೊಂದರೆಯಿಂದದಾಮ್ಲೆ ಅನಾಥಾಶ್ರಮವನ್ನು ಮುಚ್ಚಿದರು.

ADVERTISEMENT

ವಿಳಾಸ ಗೊತ್ತಿಲ್ಲದ, ಮಾತು ಬಾರದ ಅಮೀರ್‌ನನ್ನು ತಾವೇ ಸಾಕುವುದಾಗಿ ಪೊಲೀಸರಿಗೆ ತಿಳಿಸಿ ಅನುಮತಿ ಪಡೆದುಕೊಂಡಿದ್ದರು ದಾಮ್ಲೆ. ಅಮೀರ್‌ನನ್ನು ಸ್ಥಳೀಯ ಶಾಲೆಗೆ ದಾಖಲಿಸಿ ವಿದ್ಯಾಭ್ಯಾಸ ಕೊಡಿಸಿದರು. ಸದ್ಯ ಅಮೀರ್‌ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಳೆದ ತಿಂಗಳ ಶಾಲೆಯ ಆಡಳಿತ ಮಂಡಳಿಯವರು ಅಮೀರ್‌ನ ಆಧಾರ್‌ ಕಾರ್ಡ್‌ ಕೊಡುವಂತೆ ಕೇಳಿದ್ದಾರೆ. ಆಧಾರ್‌ ಇಲ್ಲದಿದ್ದರಿಂದ ಹೊಸ ಆಧಾರ್ ಕಾರ್ಡ್‌ ಪಡೆಯಲು ದಾಮ್ಲೆ, ಅಮೀರ್‌ನನ್ನುನಾಗಪುರಕ್ಕೆ ಕರೆದುಕೊಂಡು ಬಂದಿದ್ದಾರೆ. ಆಧಾರ್‌ ಕಾರ್ಡ್‌ ಕೇಂದ್ರಕ್ಕೆ ಹೋಗಿ ವಿಚಾರಿಸಿದಾಗ ಈಗಾಗಲೇ ಅಮೀರ್‌ನ ಆಧಾರ್‌ ಕಾರ್ಡ್‌ ಇರುವುದಾಗಿ ಗೊತ್ತಾಗಿದೆ.

ಕೂಡಲೇ ನಾಗಪುರ ಪೊಲೀಸರು ಅಮೀರ್‌ನ ವಿಳಾಸ ಪತ್ತೆ ಮಾಡಿ ಅವನ ಪೋಷಕರಿಗೆ ಒಪ್ಪಿಸಿದ್ದಾರೆ. ಅಮೀರ್‌ ಕಾಣೆಯಾಗುವುದಕ್ಕೂ ಮೊದಲು ಆಧಾರ್‌ ಕಾರ್ಡ್‌ ಮಾಡಿಸಲಾಗಿತ್ತು ಎಂದು ಅವನಪೋಷಕರು ಹೇಳಿದ್ದಾರೆ. ಅಮೀರ್‌ನನ್ನು 10 ವರ್ಷ ಸಾಕಿದ ದಾಮ್ಲೆ ಅವರಿಗೂ ಮತ್ತು ನಾಗಪುರ ಪೊಲೀಸರಿಗೆ ಅಮೀರ್‌ ಕುಟುಂಬದವರು ಧನ್ಯವಾದ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.