
ಜೆಮ್‌ಶೆಡ್‌ಪುರ(ಜಾರ್ಖಂಡ್): ಹುಟ್ಟಿದ ದಿನವೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿ, ಜನನ ಪ್ರಮಾಣಪತ್ರಗಳನ್ನು ನೀಡಿರುವ ಮೊದಲ ನಿದರ್ಶನ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚಕ್ರಧರಪುರ ವಿಭಾಗೀಯ ರೈಲ್ವೆ ಆಸ್ಪತ್ರೆಯಿಂದ ವರದಿಯಾಗಿದೆ.
ಶನಿವಾರ ಜನಿಸಿದ ನಾಲ್ಕು ಶಿಶುಗಳ ಆಧಾರ್ ನೋಂದಣಿಯನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
‘ಆಗ್ನೇಯ ರೈಲ್ವೆ (ಎಸ್‌ಇಆರ್) ಅಡಿಯಲ್ಲಿ ಬರುವ ರೈಲ್ವೆ ಆಸ್ಪತ್ರೆಗಳ ಪೈಕಿ ನವಜಾತ ಶಿಶುಗಳಿಗೆ ಹುಟ್ಟಿದ ದಿನವೇ ಆಧಾರ್ ನೋಂದಣಿ ಮತ್ತು ಜನನ ಪ್ರಮಾಣಪತ್ರಗಳನ್ನು ನೀಡಿದ ಮೊದಲ ನಿದರ್ಶನವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
ಚಕ್ರಧರಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ, ಜಿಲ್ಲಾಡಳಿತ ಮತ್ತು ಅಂಚೆ ಹಾಗೂ ಆಧಾರ್ ಇಲಾಖೆಗಳ ಸಂಘಟಿತ ಪ್ರಯತ್ನಗಳ ಮೂಲಕ ಇದು ಸಾಧ್ಯವಾಗಿದೆ ಎಂದು ಆಗ್ನೇಯ ರೈಲ್ವೆ ಹೊರಡಿಸಿದ ಹೇಳಿಕೆ ತಿಳಿಸಿದೆ.
ಭವಿಷ್ಯದಲ್ಲಿ, ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್‌ಗಳನ್ನು ವಿತರಿಸಲು ಅನುಕೂಲವಾಗುವಂತೆ ಈ ಇಲಾಖೆಗಳ ಅಧಿಕಾರಿಗಳು ಚಕ್ರಧರಪುರದ ರೈಲ್ವೆ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ ಎಂದು ವರದಿ ಹೇಳಿದ್ದಾರೆ.
ಈ ಉಪಕ್ರಮವು ಜನನ ಪ್ರಮಾಣಪತ್ರ ವಿತರಣೆ ಮತ್ತು ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಾಗೂ ತ್ವರಿತಗೊಳಿಸಲು ಸಹಾಯ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.